Home ಜಿಲ್ಲೆ ತರ್ಕಬದ್ಧಗೊಳಿಸುವ ಹೆಸರಲ್ಲಿ ಆಶಾಗಳನ್ನು ಕೈಬಿಡುವ ನಿರ್ಧಾರ ಹಿಂಪಡೆಯುವಂತೆ ಆಗ್ರಹ

ತರ್ಕಬದ್ಧಗೊಳಿಸುವ ಹೆಸರಲ್ಲಿ ಆಶಾಗಳನ್ನು ಕೈಬಿಡುವ ನಿರ್ಧಾರ ಹಿಂಪಡೆಯುವಂತೆ ಆಗ್ರಹ

ಸಂಜೆವಾಣಿ ವಾರ್ತೆ

 ಬಳ್ಳಾರಿ, ಮಾ.16: ತರ್ಕಬದ್ಧಗೊಳಿಸುವ ಹೆಸರಲ್ಲಿ ಆಶಾಗಳನ್ನು ಕೈಬಿಡುವ ನಿರ್ಧಾರ ಹಿಂಪಡೆಯುವಂತೆ  ಆಗ್ರಹಿಸಿ ಇಂದು ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.

ಆ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ತಮ್ಮ ಪ್ರಮುಖ ಬೇಡಿಕೆಗಳಾದ

ಕೇಂದ್ರದ ಮಾರ್ಗಸೂಚಿಯನ್ನು ಉಲ್ಲಂಘಿಸಿ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ತರ್ಕಬದ್ಧಗೊಳಿಸುವ ಹೆಸರಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆ ನಿಲ್ಲಿಸಬೇಕು. ಬಳ್ಳಾರಿ ಜಿಲ್ಲೆಯಲ್ಲೂ 200ಕ್ಕೂ ಹೆಚ್ಚು ಆಶಾಗಳನ್ನು ಕೈಬಿಡುವ ಪ್ರಕ್ರಿಯೆ ಕೂಡಲೆ ನಿಲ್ಲಿಸಬೇಕು. ಈ ಕುರಿತು ಅಧಿಕೃತ ಆದೇಶ ಹೊರಡಿಸಬೇಕು, ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ನಿಶ್ಚಿತ ಗೌರವ ಧನ ಹಾಗೂ ಇನ್ಸೆಂಟಿವ್ ಹಣ, ಆಶಾಗಳಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ವಿಳಂಬವಾಗದಂತೆ ಕ್ರಮವಹಿಸಬೇಕು, ಜನವರಿ 2025ರಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಪ್ರತಿ ಆಶಾಗೆ ಕನಿಷ್ಠ ರೂ.10,000 ಗ್ಯಾರಂಟಿ ಮಾಡುವ ಕ್ರಮಕೈಗೊಳ್ಳಬೇಕು. ಈ ಕುರಿತು ಅಧಿಕೃತ ಆದೇಶ ನೀಡಬೇಕೆಂದು ಒತ್ತಾಯಿಸಲಾಗಿದೆ.

ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷೆ ಶಾಂತಾ, ಅಧ್ಯಕ್ಷೆ ಗೀತಾ, ಕಾರ್ಯದರ್ಶ ಮಾಣಿಕ್ಯಮ್ಮ, ಶ್ರೀಮತಿ.ಜಲಜಾಕ್ಷೀ, ಶ್ರೀಮತಿ.ರಾಮಕ್ಕ, ಶ್ರೀಮತಿ.ಈರಮ್ಮ, ಶ್ರೀಮತಿ.ರೇಷ್ಮಾ, ಶ್ರೀಮತಿ.ವಸಂತಾ ಮತ್ತು ಯಶೋಧಾ ಮುಂತಾದವರು ಉಪಸ್ಥಿತರಿದ್ದರು.