Home ಜಿಲ್ಲೆ ಮಂಗಳೂರು ಟೋಲ್‌ಗೇಟ್ ಮೂಲಕ ನಾಗರಿಕರನ್ನು ಸುಲಿಯುವ ಯತ್ನ: ರಮಾನಾಥ ರೈ ಆರೋಪ

ಟೋಲ್‌ಗೇಟ್ ಮೂಲಕ ನಾಗರಿಕರನ್ನು ಸುಲಿಯುವ ಯತ್ನ: ರಮಾನಾಥ ರೈ ಆರೋಪ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕೇವಲ ೩೨ ಕಿ.ಮೀ. ಅಂತರದಲ್ಲಿ ವಳಾಲು ಮತ್ತು ಬ್ರಹ್ಮರಕೂಟ್ಲು ಎಂಬಲ್ಲಿ ಎರಡು ಟೋಲ್ ಗೇಟುಗಳನ್ನು ಸ್ಥಾಪಿಸಿರುವುದು ನಾಗರಿಕರನ್ನು ಸುಲಿಯುವ ಕಾರ್ಯತಂತ್ರವಾಗಿದೆ. ಹೆದ್ದಾರಿ ಇಲಾಖೆಯ ನಿಯಮದಂತೆ ಸೂಕ್ತ ಅಂತರದಲ್ಲಿ ಟೋಲ್ ಗೇಟು ಸ್ಥಾಪಿಸದೇ ಮನಸ್ಸೋ ಇಚ್ಚೆಯಂತೆ ಟೋಲ್ ಗೇಟುಗಳನ್ನು ಅಲ್ಲಲ್ಲಿ ಸ್ಥಾಪಿಸುವಂತಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗು ವುದೆಂದು ಮಾಜಿ ಸಚಿವ ಬಿ. ರಮಾನಾಥ ರೈ ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ ೭೫ ರ ವಳಾಲುವಿನಲ್ಲಿ ಕಾರ್ಯಾರಂಭಕ್ಕೆ ಸಿದ್ಧಗೊಳ್ಳುತ್ತಿರುವ ಟೋಲ್‌ಗೇಟ್ ಸ್ಥಳಕ್ಕೆ ಬ್ರಹ್ಮರ ಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ನಿಯೋಗವೊಂದು ಮಾ.೨೫ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ನಿಯೋಗದ ನೇತೃತ್ವ ವಹಿಸಿದ್ದ ಅವರು ಮಾತನಾಡಿದರು.
೬೦ ಕಿ.ಮೀ. ವ್ಯಾಪ್ತಿಯ ಟೋಲ್ ಗೇಟ್ ನಿಯಮವನ್ನು ಪಾಲಿಸದೇ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ನಿರ್ಮಿಸಿರುವ ಟೋಲ್‌ಗೇಟ್ ನಿಯಮಬಾಹಿರವಾಗಿದೆ. ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರ ಕೂಟ್ಲು ಟೋಲ್‌ಗೇಟ್ ತೆರವಿಗೆ ಮೊದಲ ಹಂತದ ಹೋರಾಟ ನಡೆಸಿದ್ದೇವೆ. ಅದು ತೆರವುಗೊಳ್ಳುವ ವರೆಗೂ ಹೋರಾಟ ನಡೆಸುವುದಾಗಿ ತಿಳಿಸಿದ ಅವರು ಕಾನೂನು ಬಾಹಿರವಾಗಿ, ಜನತೆಗೆ ಸಮರ್ಪಕ ಮಾಹಿತಿ ನೀಡದೆ ಸ್ಥಾಪಿಸುವ ಎಲ್ಲಾ ಟೋಲ್ ಗೇಟ್ ಗಳಿಗೂ ನಮ್ಮ ವಿರೋಧವಿದೆ ಎಂದು ಹೇಳಿದರು.
ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಸುರತ್ಕಲ್‌ನ ಒಂದು ಟೋಲ್ ಗೇಟ್ ತೆಗೆದು ಮೂರು ಟೋಲ್ ಹಾಕುವ ಪ್ರಯತ್ನ ಜಿಲ್ಲೆಯಲ್ಲಿ ಆಗುತ್ತಿದೆ. ಇದು ಜನರ ಹಿತಕ್ಕೋ ಜನರ ಸುಲಿಗೆಗೋ ಎಂದು ಪ್ರಶ್ನಿಸಿದರಲ್ಲದೆ, ಬ್ರಹ್ಮರಕೂಟ್ಲುವಿನ ಟೋಲ್ ಗೇಟ್ ತೆರವಿಗೆ ನಿರಂತರ ಹೋರಾಟಗಳು ನಡೆದಿವೆ. ಇದೀಗ ರಮಾನಾಥ ರೈ ನೇತೃತ್ವದಲ್ಲಿ ವಿಶಾಲ ಸಮಿತಿಯ ಮೂಲಕ ಹೋರಾಟ ನಡೆಸಲಾಗುತ್ತಿದೆ. ಈ ನಡುವೆ ಹಾಲಿ ಸಂಸದರು ದಾರಿ ತಪ್ಪಿಸುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ವಳಾಲು ಟೋಲ್ ಗೇಟ್ ಆರಂಭಕ್ಕೆ ಅವಕಾಶ ನೀಡುವುದೇ ಇಲ್ಲ ಎಂದವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಮಾತನಾಡಿ, ಜನಸಾಮಾನ್ಯರು ಎಲ್ಲದಕ್ಕೂ ತೆರಿಗೆ ಕೊಡುತ್ತಿದ್ದಾರೆ. ಹಾಗಿದ್ದರೂ ಟೋಲ್ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರಲ್ಲದೆ, ರೈತಾಪಿ ವರ್ಗದ ಜೊತೆಯೂ ಸಭೆ ಮಾಡಿ ಈ ಬಗ್ಗೆ ಅಭಿಪ್ರಾಯ ಪಡೆದುಕೊಳ್ಳುತ್ತೇವೆಂದು ತಿಳಿಸಿದರು.
ಈ ಸಂದರ್ಭ ಸಮಿತಿಯ ಸಂಚಾಲಕರಾದ ಮೋಹನ್ ಶೆಟ್ಟಿ, ಶೇಖರ್ ಬಿ., ಕಾರ್ಯದರ್ಶಿ ಸುರೇಶ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ದ.ಕ. ಜಿಲಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಚಂದ್ರಶೇಖರ ಭಂಡಾರಿ, ಮುಹಮ್ಮದ್ ಫಾರೂಕ್ ಪೆರ್ನೆ, ಬಾಲಕೃಷ್ಣ ಅಂಚನ್, ಶಾಹುಲ್ ಹಮೀದ್, ಸರ್ವೋತ್ತಮ ಗೌಡ, ಡಾ.ರಘು, ಸೀತಾರಾಮ ಶೆಟ್ಟಿ, ಲುಕ್ಮಾನ್, ಯು.ಟಿ.ಇರ್ಷಾದ್ , ಫೌಝರ್ , ಶಬೀರ್ ಕೆಂಪಿ, ಪಿ.ಬಿ.ವರ್ಗೀಸ್, ಲತೀಫ್ ನಿನ್ನಿಕಲ್ಲು, ಅಭಿಲಾಷ್, ಚಿತ್ತರಂಜನ್ ಶೆಟ್ಟಿ, ಅಜಿತ್ ಪಾಲೇರಿ, ಮುರಳೀಧರ್, ಶಾಹುಲ್ ಹಮೀದ್, ಸದಾಶಿವ ಬಂಗೇರ, ಸುದೀಪ್ ಕುಮಾರ್ ಶೆಟ್ಟಿ , ಅಲ್ಬರ್ಟ್ ಮಿನೇಜಸ್, ಆದಂ ಕುಂಞಿ, ಉಮೇಶ್ ಬೋಳಂತೂರು, ಸದಾಶಿವ ಬಂಗೇರ, ಹರೀಶ್ , ಭಾರತಿ ಪ್ರಶಾಂತ್, ಸುರೇಶ್, ರಾಜಾ ಚೆಂಡ್ತಿಮಾರ್, ಚಿತ್ತರಂಜನ್ ಶೆಟ್ಟಿ,ಪ್ರಶಾಂತ್ ರೈ, ಸಂತೋಷ್ ರೈ ವಳಾಲು, ಶಬೀರ್ ಸಿದ್ಧಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಸ್ವಾಗತಿಸಿದರು. ಕಾರ್ಮಿಕ ಮುಖಂಡ ಬಿ.ಎಂ. ಭಟ್ ವಂದಿಸಿದರು.