ಶಿವಮೊಗ್ಗ, ಜೂ. 16: ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ, ವೃದ್ದೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟು ಮನೆಯಲ್ಲಿದ್ದ ಇತರೆ ಸದಸ್ಯರಿಗೆ ಸಣ್ಣಪುಟ್ಟ ಗಾಯವಾದ ಘಟನೆ ತಡರಾತ್ರಿ ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಅಡಗಡಿ ಗ್ರಾಮದಲ್ಲಿ ನಡೆದಿದೆ.
100 ವರ್ಷ ವಯೋಮಾನದ ಸಿದ್ದಮ್ಮ ಮೃತಪಟ್ಟ ವಯೋವೃದ್ದೆಯಾಗಿದ್ದಾರೆ. ಇವರು ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕಿನ ಕುಂಕೋವ ಗ್ರಾಮದ ನಿವಾಸಿಯಾಗಿದ್ದಾರೆ. ಇತ್ತೀಚೆಗೆ ಅಡಗಡಿ ಗ್ರಾಮದಲ್ಲಿರುವ ಸಂಬಂಧಿ ಹೇಮಾವತಿ ಎಂಬುವರ ಮನೆಗೆ ಆಗಮಿಸಿದ್ದಾಗ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಮನೆಯಲ್ಲಿದ್ದ ಹೇಮಾವತಿ ಎಂಬುವರಿಗೆ ಗಾಯವಾಗಿದ್ದು, ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಅವರ ಕುಟುಂಬ ಸದಸ್ಯರಾದ ಪಲ್ಲವಿ, ಪರಶುರಾಮ್, ಚೇತನ್ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ತಾಲೂಕಿನ ಅಡಗಡಿ ಗ್ರಾಮದಲ್ಲಿ ತಡರಾತ್ರಿ ಮನೆ ಗೋಡೆ ಕುಸಿದು, ಸುಮಾರು 95 ರಿಂದ 100 ವರ್ಷ ವಯೋಮಾನದ ವಯೋವೃದ್ದೆ ಸಿದ್ದಮ್ಮ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಮೂಲತಃ ಹೊನ್ನಾಳ್ಳಿ ತಾಲೂಕಿನ ಕುಂಕೋವ ಗ್ರಾಮದವರಾಗಿದ್ದಾರೆ. ಸಂಬಂಧಿ ಮನೆಗೆ ಆಗಮಿಸಿದ್ದರು. ಘಟನೆಯಲ್ಲಿ ಹೇಮಾವತಿ ಎಂಬುವರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ತಾಲೂಕು ಕಚೇರಿ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ ಎಂದು ಶಿವಮೊಗ್ಗ ತಹಶೀಲ್ದಾರ್ ವಿ ಎಸ್ ರಾಜೀವ್ ಅವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.