ಅಹಮದಾಬಾದ್, ಜೂ.3- ಅಂತೂ ಇಂತೂ ಚಿನಕುರಳಿ ಕ್ರಿಕೆಟ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಈ ಸಲ ಕಪ್ ನಮ್ಮದಾಯ್ತು. 18 ನೇ ಆವೃತ್ತಿಯಲ್ಲಿ ಆರ್ ಸಿಬಿ ಮೊದಲ ಬಾರಿಗ
ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಆರು ರನ್ ಗಳಿಂದ ರೋಚಕ ಜಯ ಸಾಧಿಸಿ ಪ್ರಶಸ್ತಿಗೆ ಪಾಟಿದಾರ್ ಪಡೆ ಮುತ್ತಿಕ್ಕಿತು.
ಆರ್ ಸಿಬಿ ಇದುವರಗೆ ಐಪಿಎಲ್ ಪ್ರಶಸ್ತಿ ಗೆದ್ದಿರಲಿಲ್ಲ. 18ನೇ ಆವೃತ್ತಿಯಲ್ಲಿ ಕಡೆಗೂ ಕಪ್ ಗೆದ್ದು 17 ವರ್ಷಗಳ ವನವಾಸಕ್ಕೆ ತೆರೆ ಎಳೆಯಿತು.
191 ರನ್ ಗಳ ಗುರಿಯನ್ನು ಬೆನ್ನಹಟ್ಟಿದ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ184 ರನ್ ಗಳಿಸಿ ಸೋಲಿಗೆ ಶರಣಾಯಿತು.
ಪಂಜಾಬ್ ಪರ ಪ್ರಿಯಾಂಶ್ ಆರ್ಯ, ಪ್ರಬ್ ಸಿಮ್ರನ್ ಸಿಂಗ್ ಇನ್ನಿಂಗ್ಸ್ ಆರಂಭಿಸಿ 43 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರ್ಯ 24, ಸಿಂಗ್ 26 ರನ್ ಗಳಿಸಿ ಔಟಾದರು. ಜೋಶ್ ಲಿಂಗ್ಲಿಸ್ 39 ರನ್ ಗಳಿಸಿದರು. ಉತ್ತಮ ಆಟ ಪ್ರದರ್ಶಿಸಲು ನಾಯಕ ಶ್ರೇಯಸ್ ಅಯ್ಯರ್ ವಿಫಲರಾಗಿ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು. ಶಶಾಂಕ್ ಸಿಂಗ್ 31 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದ್ದು ವ್ಯರ್ಥವಾಯಿತು.
ನೆಹಾಲ್ ವದೇರಾ 15, ಮಾರ್ಕಸ್ ಸ್ಟೋಯಿನ್ಸ್ 6 ಅಜ್ಮತುಲ್ಲಾ ಒಮರ್ಜಾಯ್ ಒಂದು ರನ್ ಗಳಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 184 ರನ್ ಗಳಿಸಿ ಆರು ರನ್ ಗಳಿಂದ ಸೋಲು ಅನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಭುವನೇಶ್ವರ್ ಕುಮಾರ್ ಹಾಗೂ ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರೆ, ದಯಾಳ್, ಹೇಜಲ್ ವುಡ್ ಹಾಗೂ ರೊಮಾರಿಯೊ ತಲಾ ಒಂದು ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಸವಾಲಿನ190 ರನ್ ದಾಖಲಿಸಿತು.
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಿ ಬಿರುಸಿನ ಆರಂಭ ಒದಗಿಸಿದರು. ಆದರೆ, ಸಾಲ್ಟ್ 16 ರನ್ ಗಳಿಸಿ ನಿರ್ಗಮಿಸಿದರು.
ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟಕ್ಕೆ ಮಯಾಂಕ್ ಅಗರ್ ವಾಲ್ ಸಾಥ್ ನೀಡಿ 24 ರನ್ ಗಳಿಸಿದರಾದರೂ ಉತ್ತಮ ಜೊತೆಯಾಟ ಕಟ್ಟಲು ವಿಫಲರಾದರು.
ನಾಯಕ ರಜತ್ ಪಾಟೀದಾರ್ 16 ಎಸೆತಗಳಲ್ಲಿ ಬಿರುಸಿನ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಾಳ್ಮೆಯ ಆಟವಾಡುತ್ತಿದ್ದ ವಿರಾಟ್ 35 ಎಸೆತಗಳಲ್ಲಿ 43 ರನ್ ಗಳಿಸಿದರು.
ಜಿತೇಶ್ ಶರ್ಮಾ ಹಾಗೂ ಲಿಯೋಮ್ ಲಿವಿಂಗ್ ಸ್ಟೋನ್ ಬಿರುಸಿನ ಆಟವಾಡಿ ತಂಡ ಸವಾಲಿನ ಮೊತ್ತದತ್ತ ಕೊಂಡೊಯ್ದರು. 17 ನೇ ಓವರ್ ನಲ್ಲಿ ಈ ಜೋಡಿ 23 ರನ್ ಗಳಿಸಿತು. ಲಿವಿಂಗ್ ಸ್ಟೋನ್ 25 ಹಾಗೂ ಜಿತೇಶ್ ಶರ್ಮಾ 10 ಎಸೆತಗಳಲ್ಲಿ 24 ರನ್ ಗಳಿಸಿದರು. ಇವರಿಬ್ಬರು 12 ಎಸೆತಗಳಲ್ಲಿ 36 ರನ್ ಸೇರಿಸಿದರು.
ಕೃನಾಲ್ ಪಾಂಡ್ಯ 4 ಹಾಗೂ ಭುವನೇಶ್ವರ್ ಕುಮಾರ್ ಒಂದು ರನ್ ಗಳಿಸಿದರು.
ಪಂಜಾಬ್ ಜೇಮಿಸನ್ ಹಾಗೂ ಅರ್ಷ್ ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ವಿಜಯೋತ್ಸವ
ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ ಸಿಬಿ 6 ರನ್ ಗಳಿಂದು ಗೆಲುವು ಸಾಧಿಸುತ್ತಿದ್ದಂತೆ ಆರ್ ಸಿಬಿ ಪಾಳಯದಲ್ಲಿ ವಿಜಯದುಂದುಭಿ ಮೊಳಗಿತು.
ಆರ್ ಸಿಬಿ ಆಟಗಾರರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.ಈ ಹಿಂದೆ ಆರ್ ಸಿ ಬಿ ಪರ ಆಡಿದ್ದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಈ ವೇಳೆ ಕೊಹ್ಲಿ -ಎಬಿಡಿ ಪರಸ್ಪರ ತಬ್ಬಿಕೊಂಡು ವಿಜಯೋತ್ಸವ ಆಚರಿಸಿದರು.
ಇತ್ತ ಬೆಂಗಳೂರಿಲ್ಲೂ ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.