
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.20: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸುವಂತೆ ಶಾಸಕ ಹೆಚ್.ಟಿ.ಮಂಜು ರಾಜ್ಯ ವಿಧಾನ ಸಭೆಯಲ್ಲಿ ಆಗ್ರಹಿಸಿದರು.
ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆ ಎಳೆಯಾಗಿ ಸಭಾಧ್ಯಕ್ಷರ ಮುಂದಿಟ್ಟ ಶಾಸಕ ಹೆಚ್.ಟಿ.ಮಂಜು ಕೆ.ಆರ್.ಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಕರ್ನಾಟಕ ಗೃಹ ಮಂಡಳಿಯ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ ಮತ್ತು ಜಯನಗರ ಬಡಾವಣೆಗೆ ಹೊಂದಿಕೊಂಡಂತೆ ಕೆಲವು ಬಡಾವಣೆಗಳು ನಿರ್ಮಾಣಗೊಂಡಿವೆ. ಹೌಸಿಂಗ್ ಬೋರ್ಡ್ ಕಾಲೋನಿ ಹಿರೀಕಳೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ್ದರೆ, ಸರ್ಕಾರಿ ನೌಕರರ ಬಡಾವಣೆ ಮಾಕವಳ್ಳಿ ಗ್ರಾಮ ಪಂಚಾಯತಿಗೆ ಸೇರಿದೆ. ಜಯನಗರ ಬಡಾವಣೆಗೆ ಹೊಂದಿಕೊಂಡಂತಿರುವ ಬಡಾವಣೆಗಳು ಮುರುಕನಹಳ್ಳಿ ಗ್ರಾಮ ಪಂಚಾಯತಿಯ ನಾಗೇನಹಳ್ಳಿ ಎಲ್ಲೆಗೆ ಸೇರಿವೆ. ಈ ಮೂರು ಬಡಾವಣೆಗಳು ಗ್ರಾ.ಪಂ ವ್ಯಾಪ್ತಿಗೆ ಸೇರಿದ್ದರೂ ಕೆ.ಆರ್.ಪೇಟೆ ಪಟ್ಟಣಕ್ಕೆ ಹೊಂದಿಕೊಂಡಿವೆ. ಈ ಬಡಾವಣೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಿಂದಾಗಲೀ ಅಥವಾ ಗ್ರಾಮ ಪಂಚಾಯತಿಯಿಂದಾಗಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಿಲ್ಲ. ಈ ಬಗ್ಗೆ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದು ಈ ಮೂರು ಬಡಾವಣೆಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗಮನ ಸೆಳೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಸುಮಾರು 3 ರಿಂದ 4 ಸಾವಿರ ಜನ ವಾಸಿಸುತ್ತಿದ್ದಾರೆ.
ಈ ಗ್ರಾಮದಲ್ಲಿನ ಹಳೆಯ ಬೋರ್ ವೆಲ್ ಫೆÇ್ಲೀರೈಡ್ ಸಮಸ್ಯೆಯಿದ್ದು ಜನರಿಗೆ ನಿರುಪಯುಕ್ತವಾಗಿದೆ. ಹೊಸದಾಗಿ ಬೋರ್‍ವೆಲ್ ಕೊರೆಸಲು ಅವಕಾಶವಿಲ್ಲ. ಈ ಭಾಗದಲ್ಲಿ ಜನಬಳಕೆಗೆ ಅಗತ್ಯ ನೀರು ಪಡೆಯಲು ಖಾಸಗಿ ಬೋರ್‍ವೆಲ್ ಗಳೂ ಲಭ್ಯವಿಲ್ಲ. 4 ಸಾವಿರ ಜನಸಂಖ್ಯೆಯಿರುವ ಗ್ರಾಮಕ್ಕೆ ಒಬ್ಬ ವ್ಯಕ್ತಿಗೆ ಕನಿಷ್ಠ 55 ಲೀಟರ್ ನಂತೆ ಲೆಕ್ಕ ಹಾಕಿದರೂ ನಿತ್ಯ 70-80 ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾಗುತ್ತದೆ. ಇದು ಆರ್ಥಿಕವಾಗಿ ಗ್ರಾಮ ಪಂ ಗಳಿಂದ ಭರಿಸಲಾಗುವುದಿಲ್ಲ. ಈ ಹಿಂದೆ ಬೋರ್ ವೆಲ್ ಕೊರೆದಿರುವ ಗುತ್ತಿಗೆದಾರರಿಗೆ 3-4 ವರ್ಷಗಳಿಂದ ಹಣ ಪಾವತಿಸಿಲ್ಲ. ಇದರಿಂದಾಗಿ ಹೊಸದಾಗಿ ಬೋರ್ ವೆಲ್ ಕೊರೆಯಲು ಗುತ್ತಿಗೆದಾರರು ಮುಂದಾಗುತ್ತಿಲ್ಲ. ಎಲ್ಲ ವೆಚ್ಚಗಳು ಹೆಚ್ಚಾಗಿರುವ ಕಾರಣದಿಂದ ಹಳೆಯ ರೇಟ್ ಪ್ರಕಾರ ಬೋರ್ ವೆಲ್ ಕೊರೆಯಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಹೇಮಾವತಿ ನದಿಯಿಂದ ಜಲ ಜೀವನ್ ಮಿಷನ್ ಯೋಜನೆ ಮೂಲಕ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ.
ಜೆ.ಜೆ.ಎಂ ಯೋಜನೆಯಡಿಯಲ್ಲಿ ಎರಡು ಬೋರ್ ವೆಲ್ ಕೊರೆಯಲು ಅವಕಾಶವಿದೆ. ಆದರೆ ಇವರು ಕೊರೆಸಿದ ಬೋರ್ ವೆಲ್ ಗಳಲ್ಲಿ ನೀರು ಬರದಿದ್ದರೆ ಪರ್ಯಾಯವಾಗಿ ಹೊಸ ಬೋರ್ ಕೊರೆಯಲು ಅವಕಾಶವಿಲ್ಲ. ಜೆಜೆಎಂ ಗುತ್ತಿಗೆ ಕಾಮಗಾರಿ ಪಡೆದಿರುವ ಎಲ್ &ಟಿ ಕಂಪನಿ ನಿಯಮಾನುಸಾರ 22-01-2025 ರ ಅವಧಿಯೊಳಗೆ ಕಾಮಗಾರಿ ಮುಗಿಸಬೇಕಾಗಿತ್ತು. ಆದರೆ ಇದುವರೆಗೆ ಅದು ಸೇ 60 ರಷ್ಟು ಕಾಮಗಾರಿಯನ್ನೂ ಮುಗಿಸಿಲ್ಲ. ಆದರೆ ಕಾಮಗಾರಿ ಬಿಲ್ ಪಡೆಯಲು ಒತ್ತಾಯಿಸುತ್ತಿದೆ. ಸ್ಥಳೀಯ ಆರ್.ಡಿ.ಪಿ.ಐ ಅಧಿಕಾರಿಗಳ ಮಾತನ್ನೂ ಕಂಪನಿ ಕೇಳುತ್ತಿಲ್ಲ. ಕಾಮಗಾರಿ ಮುಗಿಸದೆ ಬಿಲ್ ಬರೆಯಲು ಒತ್ತಾಯಿಸುತ್ತಿರುವ ಎಲ್&ಟಿ ಏಜೆನ್ಸಿ ರದ್ದುಪಡಿಸುವಂತೆ ಶಾಸಕ ಹೆಚ್.ಟಿ.ಮಂಜು ಆಗ್ರಹಿಸಿದರು.
ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ರಾಜ್ಯ ಪಂಚಾಯತ್ ಮತ್ತು ಗ್ರಾಮೀಣ ಅಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ 2017 ರಲ್ಲಿಯೇ ಹೌರ್ಸಿಂಗ್ ಬೋರ್ಡ್ ಕಾಲೋನಿಯನ್ನು ಹಿರೀಕಳಲೆ ಗ್ರಾ.ಪಂ ಗೆ ಹಸ್ತಾಂತರಿಸಿದ್ದು ಅವರು ಅಲ್ಲಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಗ್ರಾ.ಪಂ ಗೆ ಹಸ್ತಂತರವಾದಾಗ ಅಲ್ಲಿ ಕೇವಲ 20 ಮನೆಗಳಿದ್ದು ಈಗ ಅದರ ಸಮಖ್ಯೆ 100 ದಾಟಿದೆ. ಮುರುಕನಹಳ್ಳಿ ಗ್ರಾ.ಪಂ ವ್ಯಾಪ್ತಿಯ ನಾಗೇನಹಳ್ಳಿ ಎಲ್ಲೆಯಲ್ಲಿ ಪಟ್ಟಣಕ್ಕೆ ಹೊಂದಿಕೊಂಡಂತೆ 20-30 ಮನೆಗಳು ತಲೆ ಎತ್ತಿದ್ದು ಇವುಗಳಿಗೆ ಅಗತ್ಯ ರಸ್ತೆ, ಕುಡಿಯುವ ನೀರು ಮತ್ತಿತರ ಮೂಲಭೂತ ಸೌಲಭ್ಯಗಳಿಲ್ಲ. ಇದಕ್ಕಾಗಿ 14 ಲಕ್ಷ ರೂ ಎಸ್ಟಿಮೇಟ್ ಮಡಲಾಗಿದೆ. ಆದರೆ ಇಲ್ಲಿನ ಕುಡಿಯುವ ನೀರಿಗೆ ಅಗತ್ಯವಾದ ಹಣವನ್ನು ಯಾವ ನಿಧಿಯಿಂದ ಭರಿಸಬೇಕೆಂದು ನಿರ್ಧರಿಸಬೇಕಾಗಿದ್ದು ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.
ಅಗತ್ಯವಿರುವ ಕಡೆ ಹೊಸದಾಗಿ ಬೋರ್ ವೆಲ್ ಕೊರೆಸಲು ಟಾಸ್ಕ್ ಫೆÇೀರ್ಸ್ ರಚಿಸಲಾಗುತ್ತಿದ್ದು ಇದಕ್ಕೆ ಶಾಸಕರೆ ಅಧ್ಯಕ್ಷರಾಗಿರುತ್ತಾರೆ. ಟಾಸ್ಕ್ ಫೆÇೀರ್ಸ್ ಅನುಮೋಧನೆಯಿಲ್ಲದೆ ಹೊಸ ಬೋರ್ ಕೊರೆಸಲು ಅವಕಾಶವಿಲ್ಲ. ಈ ಹಿಂದೆ ಯಾವುದೇ ಅನುಮೋದನೆ ಪಡೆಯದೆ ಬೇಕಾಬಿಟ್ಟಿ ಬೋರ್ ಕೊರೆಸಲಾಗಿದೆ. ಹಳೆಯ ಬೋರ್ ವೆಲ್ ಗುತ್ತಿಗೆದಾರರಿಗೆ ಸುಮಾರು 88 ಕೋಟಿ ಬಾಕಿ ಪಾವತಿಸಬೇಕಾಗಿದೆ. ನೀರಾವರಿ, ಗ್ರಾಮೀಣ ಅಭಿವೃದ್ದಿ ಇಲಾಖೆ ಮತ್ತು ಕೃಷಿ ಇಲಾಖೆಗಳ ಜಂಟಿ ಸಮಿತಿ ರಚಿಸಿ ಆಯಾ ಭಾಗದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದರು.































