
ಪುತ್ತೂರು; ೬೦೪ ಪುಟಗಳು..೩೦೨ ದಿನಗಳು.. ೨೪೧೬ ಗಂಟೆಗಳು.. ಪುಸ್ತಕದ ತೂಕ ೧೪ ಕೆಜಿ. ಕರ್ನಾಟಕದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಪವಿತ್ರಗ್ರಂಥ ‘ಕುರಾನ್ ನನ್ನು ಕ್ಯಾಲಿಗ್ರಾಫಿ ಪೆನ್ನಲ್ಲಿ ಕೈಬರಹದಲ್ಲಿ ಬರೆಯುವ ಮೂಲಕ ಪುತ್ತೂರಿನ ೨೨ ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಅದ್ವಿತೀಯ ಸಾಧನೆ ಮಾಡಿದ್ದಾಳೆ.
ಪುತ್ತೂರಿನ ಬೈತಡ್ಕ ಎಂಬಲ್ಲಿನ ನಿವಾಸಿ ಇಸ್ಮಾಯಿಲ್ ಮತ್ತು ಝುಹ್ರ ಜಾಸ್ಮೀನ್ ಅವರ ದ್ವಿತೀಯ ಪುತ್ರಿ ಸಜ್ಲ ಇಸ್ಮಾಯಿಲ್ ಈ ಸಾಧಕಿ. ೨೦೨೧ರಲ್ಲಿ ಆರಂಭಿಸಿದ ಈ ಪವಿತ್ರ ಕುರಾನ್ ಕೈ ಬರಹದ ಪ್ರತಿಯನ್ನು ೨೦೨೫ ಆಗಸ್ಟ್ ನಲ್ಲಿ ಅಂತಿಮ ಗೊಳಿಸಿದ ಈಕೆ ದಿನವೊಂದಕ್ಕೆ ಸತತ ೮ ಗಂಟೆಗಳನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದಾಳೆ. ಇಂಕ್ ಬಾಟಲಿಗೆ ಪೆನ್ ನಿಬ್ಬನ್ನು ಅದ್ದಿ ದಿನವೊಂದಕ್ಕೆ ೨ ಪೇಜ್ ಬರೆಯುತ್ತಿದ್ದ ಸಜ್ಲ ಅವರ ದಾಖಲೆಯನ್ನು ಲಿಮ್ಕಾ ಬುಕ್ ನಲ್ಲಿ ದಾಖಲಿಸಲು ಪ್ರಯತ್ನಗಳು ನಡೆಯುತ್ತಿದೆ.
೬೦೪ ಪುಟಗಳ ಕೈಬರಹದ ಈ ಗ್ರಂಥ ರಚನೆಗೆ ೨೫ ಇಂಕ್ ಬಾಟಲಿಗಳನ್ನು ಬಳಿಸಿರುವ ಆಕೆ ೨೦ ಪರ್ಮನೆಂಟ್ ಮಾರ್ಕರ್, ೧೫೨ ಚಾಟ್ ಪೇಪರ್ ೧೦೦ ಪೀಸು ಇರೇಜರ್ ಉಪಯೋಗಿಸಿದ್ದಾಳೆ. ೨೨ ಇಂಚು ಅಗಲ ೧೪ ಇಂಚು ಉದ್ದ ಹಾಗೂ ೫.೫ ಇಂಚು ದಪ್ಪದ ಈ ಧಾರ್ಮಿಕ ಪವಿತ್ರ ಗ್ರಂಥ ರಚನೆ ಮಾಡಿರುವ ಈಕೆಗೆ ಕೇವಲ ೪ ತಿಂಗಳಲ್ಲಿ ಪೂರ್ತಿ ಮಾಡುವ ಪುಟ್ಟ ಗಾತ್ರದ ಇನ್ನೊಂದು ಕೈ ಬರಹದ ಕುರಾನ್ ಸೃಷ್ಟಿಸುವ ಬಯಕೆ ಇದೆ.
ಇದೇ ರೀತಿಯಲ್ಲಿ ಕುರಾನ್ ಗ್ರಂಥವನ್ನು ಕೈ ಬರಹದ ಮೂಲಕ ಮೂವರು ವಿದ್ಯಾರ್ಥಿನಿಯರು ಬರೆದಿದ್ದಾರೆ. ಆದರೆ ಓರ್ವ ಕನ್ನಡತಿ ಈ ಗ್ರಂಥವನ್ನು ಕೈ ಬರಹದ ಮೂಲಕ ದಾಖಲಿಸಿರುವುದು ಇದೇ ಮೊದಲಾಗಿದೆ.
ಬಿಕಾಂ ಪದವಿ ಪಡೆದಿರುವ ಈಕೆ ಪುತ್ತೂರಿನ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ. ಇದೊಂದು ಸ್ಮರಣೆಯ ಹಾದಿ. ಕುರಾನ್ ಗ್ರಂಥವನ್ನು ಹಿಂದೆ ಪ್ರವಾದಿಗಳು ಕೈಯಲ್ಲಿಯೇ ಬರೆದಿದ್ದರು. ಆ ಬಳಿಕ ೧೫೩೭-೩೮ರಲ್ಲಿ ಕುರಾನಿನ ಮುದ್ರಣ ಪ್ರತಿಯೂ ಆಗಿತ್ತು. ಆದರೆ ಇದೀಗ ಬೃಹತ್ ಗ್ರಂಥವನ್ನು ಮತ್ತೆ ಕಲಂ ಮತ್ತು ಮಸಿ ಬಳಸಿ ಇಂಕ್ನಲ್ಲಿ ನಿಬ್ಬನ್ನು ಅದ್ದಿ ಹಳೆಯ ರೀತಿಯಲ್ಲಿ ಹೊಸ ವಿನ್ಯಾಸದೊಂದಿಗೆ ಬರೆಯುವ ಮೂಲಕ ಈ ಸಾಧನೆಯನ್ನು ವಿದೇಶಗಳು ಹಾಗೂ ಅರೇಬಿಕ್ ದೇಶಗಳ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಜತೆಗೆ ರಾಜ್ಯದ ವಿದ್ಯಾರ್ಥಿನಿ ಮಾಡಿರುವ ಈ ಸಾಧನೆ ಬಗ್ಗೆಕರ್ನಾಟಕ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸಕ್ಕೂ ಮುನ್ನುಡಿ ಬರೆಯಲಾಗಿದೆ.
ಕೈಬರಹದ ಕುರಾನ್ ಗ್ರಂಥ ಲೋಕಾರ್ಪಣೆ
ಪುತ್ತೂರಿನ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಶನಿವಾರ ಪತ್ರಕರ್ತರ ಮುಂದೆ ಈ ಸಜ್ಲ ಇಸ್ಮಾಯಿಲ್ ಬರೆದ ೧೪ ಕೆಜಿಯ ಕೈಬರಹದ ಕುರಾನ್ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಮರ್ಕಝುಲ್ ಹುದಾ ಕುಂಬ್ರದ ಅಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಮರ್ಕಝ್ ನಾಲೇಜ್ ಸಿಟಿ ಕೇರಳದ ಯಾಸೀನ್ ಸಖಾಫಿ ಅಲ್ ಅಝ್ಹರಿ, ಮರ್ಕಝುಲ್ ಹುದಾ ಕುಂಬ್ರದ ಉಪಾಧ್ಯಕ್ಷ ಡಾ.ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ ಇಂದ್ರಾಜೆ, ಕುಂಬ್ರ ಮರ್ಕಝುಲ್ ಹುದಾ ಶರೀಯತ್ ಕಾಲೇಜಿನ ಪ್ರಾಂಶುಪಾಲ್ ವಳವೂರು ಮುಹಮ್ಮದ್ ಸ ಅದಿ ಉಸ್ತಾದ್, ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಹಾಜಿ ಕನ್ಯಾನ, ಸಾಧಕ ವಿದ್ಯಾರ್ಥಿನಿಯ ತಂದೆ ಇಸ್ಮಾಯಿಲ್ ಹಾಜಿ ಬೈತಡ್ಕ, ಉಪಪ್ರಾಂಶುಪಾಲ ಜಲೀಲ್ ಸಖಾಫಿ, ಶರೀಯತ್ ವಿಭಾಗದ ಹನೀಫ್ ಸಖಾಫಿ ಕಡಬ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಮುಹಮ್ಮದ್ ಮನ್ಸೂರು ಕಡಬ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಮೇಘಾ ಪಾಲೆತ್ತಾಡಿ