
ಸಂಜೆವಾಣಿ ವಾರ್ತೆ
ಬಳ್ಳಾರಿ ಏ, 21: ಪರಸ್ಪರ ಸ್ನೇಹ, ಸಹಬಾಳ್ವೆ , ಸೌಜನ್ಯ ಸೌಹಾರ್ದತೆ, ಶಾಂತಿಯಿಂದ ನಾವೆಲ್ಲರೂ ಬದುಕಿ ಭಾರತದ ನೆಲದಲ್ಲಿ ಬಹುತ್ವವನ್ನು ಎತ್ತಿ ಹಿಡಿಯಬೇಕಾದ ಅಗತ್ಯ ಇಂದಿನ ಕೇಡುಗಾಲಕ್ಕಿದೆ ಎಂದು ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಅಭಿಪ್ರಾಯಪಟ್ಟರು.
ತಾಲೂಕಿನ ದಮ್ಮೂರು ಗ್ರಾಮದ ವೆಂಕಾವಧೂತ ಮಠದಲ್ಲಿ ಸರಳಾದೇವಿ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ’ಹೊಸ ತಲೆಮಾರು ಮತ್ತು ಸೌಹಾರ್ದತೆ’ ವಿಷಯದ ಕುರಿತು ಮಾತನಾಡಿದರು.
ನಮ್ಮ ಸುತ್ತಲಿನ ಸಮಾಜದಲ್ಲಿ ಮೋಸ, ವಂಚನೆ, ಶೋಷಣೆ, ಅತ್ಯಾಚಾರ, ದೌರ್ಜನ್ಯ, ಮರ್ಯಾದೆಗೇಡು ಹತ್ಯೆ ,ಜಾತಿ ತಾರತಮ್ಯ ಕೃತ್ಯಗಳು ಢಾಳಾಗಿ ಗೋಚರಿಸುತ್ತಿವೆ. ಇವುಗಳ ಸಂಕಟದ ಮಗ್ಗಲು ಕಲಕಬೇಕಿದೆ. ಹೊಸ ತಲೆಮಾರು ಗಂಭೀರವಾಗಿ ಆಲೋಚಿಸಿ,ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಿ ನವ ಸಮಾಜಕ್ಕೆ ಕೈಜೋಡಿಸಬೇಕಿದೆ ಎಂದು ವಿಶ್ಲೇಷಿಸಿದರು.
ಸಹಾಯಕ ಪ್ರಾಧ್ಯಾಪಕ ದೊಡ್ಡ ಬಸವರಾಜ್ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ವರ್ತಮಾನಕ್ಕೆ ಸೌಹಾರ್ದತ ಮೌಲ್ಯಗಳು ಬದುಕಿನ ಗುರಿಯಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಯಕ್ರಮಾಧಿಕಾರಿ ಕೆ. ಬಸಪ್ಪ ಸಕರಾತ್ಮಕ ಮಾನವ ಮೌಲ್ಯಗಳು ಮತ್ತು ನೈತಿಕ ತತ್ವಗಳನ್ನು ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನಾ ಘಟಕವು ಸಹಕಾರಿಯಾಗಲಿದೆ. ಭಾರತೀಯ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯವು ಸೌಹಾರ್ದತೆಯ ವಿಚಾರಗಳನ್ನೇ ಪ್ರಧಾನ ಆಶಯವಾಗಿಸಿಕೊಂಡಿದೆ. ಯುವ ಸಮುದಾಯ ನವ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಬಹಳ ಎಚ್ಚರಿಕೆಯಿಂದ ಬದುಕನ್ನು ರೂಪಿಸಿಕೊಂಡು ಹೆಜ್ಜೆಗಳನ್ನು ಇಡಬೇಕಾಗಿದೆ ಎಂದರು.
ವೇದಿಕೆಯ ಮೇಲೆ ಎನ್. ಎಸ್. ಎಸ್. ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಬಿ.ರಾಮಸ್ವಾಮಿ, ಎಂ. ಎನ್. ಪ್ರವೀಣಕುಮಾರ,ಅತಿಥಿ ಉಪನ್ಯಾಸಕ ಮಾರೆಪ್ಪ, ಯುವ ಕಲಾವಿದ ಆಂಜನೇಯ ಇದ್ದರು.





















