
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.13: ಜಿಲ್ಲೆಯ ಹಿರಿಯ ರಂಗ ಕಲಾವಿದರು, ಉದ್ಯಮಿಗಳು, ಸಮಾಜ ಸೇವಕರೂ ಆಗಿದ್ದ ರಮೇಶಗೌಡ ಪಾಟೀಲ್(78) ಅವರು ಇಂದು ಬೆಳಗಿನ ಜಾವ 1.30 ಕ್ಕೆ ನಿಧನರಾಗಿದ್ದಾರೆ. ಇವರ ಅಂತ್ಯ ಕ್ರಿಯೆ ನಗರದ ವೀರಶೈವ ರುದ್ರಭೂಮಿಯಲ್ಲಿ ಇಂದು ಸಂಜೆ 3.30 ಕ್ಕೆ ಕ್ಜೆ ನೆರವೇರಲಿದೆ.
ಪತ್ನಿ ಗಂಗಮ್ಮ ಪಾಟೀಲ್, ಪುತ್ರರಾದ ರಾಜಶೇಖರ ಪಾಟೀಲ್, ರಾಮನಗೌಡ ಪಾಟೀಲ್, ಪುತ್ರಿ ಶ್ರೀದೇವಿ ಸೇರಿದಂತೆ ಅಪಾರ ಬಂಧಗಳನ್ನು, ಅವರ ನೆಚ್ಚಿನ ಕಲಾವಿದರು, ಕಲಾಸಕ್ತರನ್ನು ಅಗಲಿದ್ದಾರೆ.
ಸಾಮಾಜಿಕ, ಐತಿಹಾಸಿಕ, ಪೌರಾಣಿಕದ ನೂರಾರು ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದರು.
ಹಂಪಿ ಉತ್ಸವದ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣದೇವರಾಯನ ಪಾತ್ರ ಅಭಿನಯಿಸಿದ್ದರು. ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಸವಣ್ಣನವರ ಪಾತ್ರ ಕಲಾಸಕ್ತರ ಗಮನಸೆಳೆದಿತ್ತು. ಕೃಷ್ಣ, ಕೌರವ, ಮೊದಲಾದ ಪೌರಾಣ೮ಕ ಪಾತ್ರದಲ್ಲೂ ಅವರ ಅಭಿನಯ ಮನೋಜ್ಞವಾಗಿತ್ತು.
ಆಡು ಮುಟ್ಟದ ಸೊಪ್ಪಿಲ್ಲ. ರಮೇಶಗೌಡ ಅಭಿನಯಿಸದ ಪಾತ್ರವಿಲ್ಲ ಎಂಬಂತೆ ಅವರು ನೂರಾರು ಕನ್ನಡ, ತೆಲುಗು ಭಾಷೆಯ ನಾಟಕಗಳಲ್ಲಿ ಅಭಿನಯಿಸಿದ್ದರು. ಅಚರ ಅಸಖಲಿತ ಡೈಲಾಗ್ ಗಳಿಂದ ಪ್ರೇಕ್ಷಕರನ ಸೂರೆಗೊಳ್ಳುತ್ತಿದ್ದರು. ನಾಟಕದ ಪದ್ಯಗಳನ್ನು ಸುಲಲಿತವಾಗಿ ಹಾಡುತ್ತಿದ್ದರು. ಅವರು ಯಾವುದೇ ಪಾತ್ರಕೊಟ್ಟರು ಅದನ್ನು ಲೀಲಾಜಾಲವಾಗಿ ಅಭಿನಯಿಸುವ ಪ್ರೌಡಿಮೆ ಅವರದ್ದಾಗಿತ್ತು.
ಇತ್ತೀಚೆಗೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ನೆನಪಿನ ಮರೆವು ಹೆಚ್ಚಿ ಅಭಿನಯದಿಂದ ದೂರಸರಿದರು. ಡಾ.ಜೋಳದರಾಶಿ ದೊಡ್ಡನಗೌಡರ “ಸಾಯದವನ ಸಮಾಧಿ” ಎಂಬ ನಾಟಕವನನ್ನು ರಾಘವ ಕಲಾಮಂದಿರದಲ್ಲಿ ಕಿರಿಯ ಕಲಾವಿದ ಸುಯೋಗಗೌಡ ಅವರ ಜೊತೆ ಅಭಿನಯಿಸಿದ್ದು ಅವರ ಕಲಾ ಬದುಕಿನ ಕೊನೆಯ ರಂಗ ಪ್ರಯೋಗ ಆಗಿತ್ತು.
ಪ್ರಶಸ್ತಿಗಳು:
ರಮೇಶಗೌಡ ಪಾಟೀಲರಿಗೆ ನಾಟಕ ಅಕಾಡೆಮಿ ಪ್ರಶಸ್ತಿ, ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗೌರವ ಪ್ರಶಸ್ತಿ ನೀಡಿ ಗೌರವಿಸಿದ್ದವು. 2023 ರಲ್ಲಿ ಬಳ್ಳಾರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಕಾಡೆಮಿ ಸದಸ್ಯರಾಗಿ:
ಇವರ ರಂಗಭೂಮಿ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ನಾಟಕ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿತ್ತು.
ಉದ್ಯಮಿಯಾಗಿ:
ಇವರು ಗೋದಿ ಸೋಜಿಯ ಪ್ಯಾಕ್ಟರಿಯನ್ನು ಹೊಂದಿದ್ದರು. ಇದರಿಂದಾಗಿ ಚೇಂಬರ್ ಆಫ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಾಮಾಜಿಕ, ಶಿಕ್ಷಣ ಸೇವೆ:
ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಹೀರದ ಸೂಗಮ್ಮ ಪ್ರೌಢ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ರಾಮೇಶಗೌಡ ಕಲಾ ಟ್ರಸ್ಟ್ ಮೂಲಕ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದರು.
ಶೋಕ:
ರಮೇಶಗೌಡ ಪಾಟೀಲರ ನಿಧನಕ್ಕೆ ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ, ಡಾ.ಎಸ್.ಜೆ.ವಿ.ಮಹಿಪಾಲ್, ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಕೆ.ಚೆನ್ನಪ್, ಅಧ್ಯಕ್ಷ ಕೋಟೇಶ್ವರ ರಾವ್, ಪದಾಧಿಕಾರಿಗಳು, ಸದಸ್ಯರು. ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ. ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಮೇಯರ್ ಪಿ.ಗಾದೆಪ್ಪ. ವೀರೇಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು. ಬಳ್ಳಾರಿ ಜಿಲ್ಲಾ ಇತಿಹಾಸ ಅಕಾಡಮಿಯ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ, ಬಳ್ಳಾರಿ ಕಲ್ಚರಲ್ ಅಕ್ಟಿವೀಟಿಸ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ನಗರದ ವಿವಿಧ ಕಲಾವಿದರು, ಕಲಾವಿದರಾದ ಹಂದ್ಯಾಳ ಪುರುಷೋತ್ತಮ, ಅಲಾಪ್ ಸಂಗೀತ ಕಲಾ ಟ್ರಸ್ಟ್ ನ ಅಧ್ಯಕ್ಷ ರಮಣಪ್ಪ ಭಜಂತ್ರಿ, ಪಾಟೀಲರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ































