Home ಜಿಲ್ಲೆ ಮಂಗಳೂರು ರೈ ಗೆ ‘ರಾಜಕೀಯರಕ್ಷಣೆ’ ಅಭಿವೃದ್ಧಿಗೆ ಪೂರಕ- ಜಾರಕಿಹೊಳಿ

ರೈ ಗೆ ‘ರಾಜಕೀಯರಕ್ಷಣೆ’ ಅಭಿವೃದ್ಧಿಗೆ ಪೂರಕ- ಜಾರಕಿಹೊಳಿ

ಪುತ್ತೂರು; ರಾಜಕಾರಣದೊಂದಿಗೆ ಮಣ್ಣಿನ ಸಂಸ್ಕೃತಿ ಸಮಾಜಸೇವೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ. ಕಂಬಳದಂತಹ ಗ್ರಾಮೀಣಕ್ರೀಡೆಗಳು ಈ ಸಂಸ್ಕೃತಿಯಿಂದ ಮರೆಯಾಗಬಾರದು. ಇಂತಹ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕ್ರಿಯೆಗೆ ರಾಜಕಾರಣಿಗಳು ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಶಾಸಕ ಅಶೋಕ್ ರೈ ಅವರು ಮಾದರಿಯಾಗಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಶನಿವಾರ ರಾತ್ರಿ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡಿರುವ ಉಬಾರ್ ಕಂಬಳೋತ್ಸವದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಬಳಕ್ಕೆ ರಾಜ್ಯ ಸರ್ಕಾರ ಈಗಾಗಲೇ ಅನುದಾನ ನೀಡುತ್ತಿದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಿರಂತರವಾಗಿರಬೇಕು. ಶಾಸಕ ಅಶೋಕ್ ರೈ ಅವರು ಇಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಶಾಸಕತ್ವಕ್ಕೆ ಅರ್ಥ ನೀಡಿದ್ದಾರೆ. ಅವರಿಗೆ ರಾಜಕೀಯರಕ್ಷಣೆ ನೀಡಿದರೆ ಮತ್ತಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ. ಇಂದು ಕೆಲ ಭಾಗಗಳಿಗೆ ನನ್ನನ್ನು ಕರೆದುಕೊಂಡು ಹೋಗಿ ಸೇತುವೆ ರಸ್ತೆಗಳ ಬೇಡಿಕೆ ಇಟ್ಟಿದ್ದಾರೆ. ಅತೀ ಶೀಘ್ರದಲ್ಲಿ ಇದಕ್ಕೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಅವರು ಹೇಳಿದರು.
ಕೋಳಿಅಂಕಕ್ಕೂ ಹೋರಾಟ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಅವರು ಸರಳ ಮತ್ತು ಸಜ್ಜಿನಿಕೆಯ ಮೂರ್ತರೂಪವಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಎಲ್ಲಾ ಶಾಸಕರಿಗೂ ಸಮಾನನ್ಯಾಯ ನೀಡುವ ಸಚಿವರು. ಪುತ್ತೂರು ಕ್ಷೇತ್ರಕ್ಕೆ ಈಗಾಗಲೇ ೨೮೪ಕೋಟಿ ಅನುದಾನ ನೀಡಿದ್ದಾರೆ. ಕಂಬಳ ನಮ್ಮ ಆಸ್ತಿ. ಕಂಬಳಕ್ಕೆ ರಾಜ್ಯ ಸರ್ಕಾರ ೧.೧೫ ಕೋಟಿ ಅನುದಾನ ನೀಡಿದೆ. ಕಂಬಳ ಮತ್ತು ತುಳುಭಾಷೆಗಾಗಿ ನಿರಂತರವಾಗಿ ಹೋರಾಟ ನಡೆಸುತಿದ್ದೇನೆ. ಕೋಳಿಅಂಕವೂ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಹಾಗಾಗಿ ಇಂತಹ ಸಾಂಪ್ರದಾಯಿಕ ಕೋಳಿಅಂಕಕ್ಕೆ ಅನುಮತಿ ನೀಡಬೇಕು ಎಂದು ಹೋರಾಟ ನಡೆಸುತ್ತೇನೆ. ತುಳುಭಾಷೆಯನ್ನು ರಾಜ್ಯಸರ್ಕಾರ ೨ನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರನಟ ಅರವಿಂದ ಬೋಳಾರ್ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕುದ್ರೋಳಿ ಶ್ರೀ ಗೋಕರ್ಣ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಆರ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಚಿತ್ರನಟರಾದ ಸನಿಲ್ ಗುರು, ಪುಷ್ಪರಾಜ್ ಬೊಳ್ಳಾರ್ ಮಾತನಾಡಿದರು.
ಉದ್ಯಮಿ ಮಾಸ್ಟರ್ ಪ್ಲ್ಯಾನರಿಯ ಎಸ್.ಕೆ.ಆನಂದ್, ಕಂಬಳ ಕ್ಷೇತ್ರದ ಸದಾಶಿವ ಸಾಮಾನಿ ಸಂಪಿಗೆದಡಿ, ಕಂಬಳ ಮತ್ತು ಶಿಲ್ಪಶಾಸ್ತ್ರದ ಬೆಳ್ಳಿಪ್ಪಾಡಿ ಕೊಡಪೊಟ್ಯ ಸುರೇಶ್ ಕೃಷ್ಣಯ್ಯ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಸನ್ಮಾನಿಸಿದರು. ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಆಟಗಾರ ಆಧೀಶ್ ಶೆಟ್ಟಿ ಬರೆಮೇಲು ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ನವೀನ್ ಭಂಡಾರಿ, ಕೆ.ಪಿ.ಸಿ.ಸಿ. ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ಕಂಬಳದ ತೀರ್ಪುಗಾರ ಗುಣಪಾಲ ಕಡಂಬ, ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಉಪ್ಪಿನಂಗಡಿ ಬ್ಲಾಕ್ ಕಾಂಗೇಸ್ ಅಧ್ಯಕ್ಷ ತೌಸೀಫ್ ಯು.ಟಿ., ಜಿ.ಪಂ. ಮಾಜಿ ಸದಸ್ಯ ಸರ್ವೋತ್ತಮ ಗೌಡ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಫಾರೂಕ್ ಪೆರ್ನೆ, ಡಾ. ರಾಜಾರಾಮ್ ಕೆ.ಬಿ., ಜಯಪ್ರಕಾಶ್ ಬದಿನಾರು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
ವರುಣನ ಅವಾಂತರ
ಉಪ್ಪಿನಂಗಡಿ ಭಾಗದಲ್ಲಿ ಶನಿವಾರ ಸಂಜೆ ಬೀಸಿದ ಭೀಕರ ಗಾಳಿ ಮಳೆಗೆ ಕಂಬಳವನ್ನು ಅರ್ಧ ತಾಸು ನಿಲ್ಲಿಸಬೇಕಾಯಿತು. ಕಂಬಳದ ವೇದಿಕೆಗೆ ಅಳವಡಿಸಿದ್ದ ಅಲಂಕಾರಿಕಾ ಬಟ್ಟೆಗಳು, ಬೃಹತ್ ಫ್ಲೆಕ್ಸ್ ಗಾಳಿಗೆ ಹಾರಿ ಹೋಯಿತು. ಆದರೆ ವೇದಿಕೆಗೆ ಯಾವುದೇ ಹಾನಿಯಾಗಲಿಲ್ಲ. ಅಭಿನಂದನೆ ಕೋರಿ ಹಾಕಲಾದ ಬಹುತೇಕ ಫ್ಲೆಕ್ಸ್ ಗಳನ್ನು ನೆಲಕ್ಕೆ ಕೆಡವಿದ ವರುಣನ ಅವಾಂತರ ಸೃಷ್ಟಿಸಿದ.