
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,9- ನಗರದ ಆರಾಧ್ಯ ದೇವತೆ ದುರ್ಗಮ್ಮ ದೇವಿಯ ವಾರ್ಷಿಕ ಸಿಡಿಬಂಡಿ ರಥೋತ್ಸವ ಈ ವರ್ಷ ಫೆ.24 ರಂದು ನಡೆಯಲಿದೆ. ಇದನ್ನು ಕಳೆದ ವರ್ಷಗಳಿಗಿಂತ ವಿಜೃಂಭಣೆಯಿಂದ ಮೈಸೂರಿನ ನಾಡ ಹಬ್ಬದಂತೆ ಆಚರಿಸಲಿದೆಂದು ನಗರ ಶಾಸಕ ಭರತ್ ರೆಡ್ಡಿ ಹೇಳಿದರು.
ಅವರು ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಇಂದು ಫೆ. 24 ರಂದು ನಡೆಯುವ ಸಿಡಿ ಬಂಡಿ ಉತ್ಸವದ ಪೂರ್ವ ಸಿದ್ದತಾ ಸಭೆ ನಡೆಸಿ ಮಾತನಾಡುತ್ತಿದ್ದರು. ಇದು ಆರಾಧ್ಯ ದೇವತೆ ಭಕ್ತ ಸಮೂಹಕ್ಕೆ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಿಡಿಬಂಡಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ಪಾಸ್ ಗಳನ್ನು ನೀಡಬೇಕು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಬೇಕು ಎಂದು ಹೇಳಿದರು.
ಮೇಯರ್ ಪಿ.ಗಾದೆಪ್ಪ ಮಾತನಾಡಿ, ಕಳೆದ ಎರೆಡು ವರ್ಷದಿಂದ ಭಕ್ತರಿಗೆ ಹೆಚ್ಚಿನ ಅನುಕೂಲದ ರೀತಿಯಲ್ಲಿ ಸಿಡಿಬಂಡಿ ಉತ್ಸವ ನಡೆಸುತ್ತಾ ಬಂದಿದೆ. ಎಲ್ಲ ಭಕ್ತರ ಸಹಕಾರದಿಂದ ಇದು ಸಾಧ್ಯ ಈ ವರ್ಷ ಇನ್ನೂ ಹೆಚ್ಚಿನ ಬಂದೋಬಸ್ತು, ಪಾರ್ಕಿಂಗ್ ವ್ಯವಸ್ಥೆ, ಸಂಚಾರಿ ವ್ಯವಸ್ಥೆ, ದೀಪಾಲಂಕಾರ, ಪ್ರಸಾದ, ನೀರಿನ ವ್ಯವಸ್ಥೆ ಮಾಡಬೇಕಿದೆಂದರು.
ದೇವಸ್ಥಾನದ ಸಮೀಪದಲ್ಲಿ ಅಂದಾಜು ಎರೆಡು ಎಕರೆ ಜಾಗ ಇದೆ. ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಅಲ್ಲಿ ಯಾತ್ರಿಕರಿಗೆ ಡಾರ್ಮಿಟರಿ (ತಂಗುತಾಣ) ನಿರ್ಮಿಸಲು ಶಾಸಕರು ಮುಂದಾಗಬೇಕೆಂದು ಗಾದೆಪ್ಪ ಮನವಿ ಮಾಡಿದರು.
ಪಾಲಿಕೆ ಸದಸ್ಯ ಹನುಮಂತಪ್ಪ ಕೆ. ಮಾತನಾಡಿ, ಸಿಡಿ ಬಂಡಿ ಆದ ತಕ್ಷಣ ಪೊಲೀಸರು ಹೋಗುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತೆ. ಇದನ್ನು ಸರಿಯಾಗಿ ನಿಭಾಯಿಸಬೇಕು ಎಂದರು.
ಸಭೆಯಲ್ಲಿ ಹಳ್ಳಿಗಳಿಂದ ವಿಶೇಸ ಬಸ್ ಓಡಿಸಲು, ಪಾಲಿಕೆಯಿಂದ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಕಡಿತ ಮತ್ತು ಸರಬಾರಿಜಿನ ವ್ಯವಸ್ಥೆ, ಪೊಲೀಸ್ ಬಂದೋಬಸ್ತು ಮೊದಲಾದವುಗಳ ಬಗ್ಗೆ ಅಧಿಕಾರಿಗಳು ತಿಳಿಸಿದರು.
ಪಾಲಿಕೆ ಆಯುಕ್ತ ಪಿ.ಸಿ. ಮಂಜುನಾಥ, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ. ಪಾಲಿಕೆ ಸದಸ್ಯರಾದ ಹನುಂಮತಪ್ಪ ಕೆ. ನಗರ ಡಿವೈಎಸ್ಪಿ, ಚಂದ್ರಕಾಂತ ನಂದಾರೆಡ್ಡಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸವಿತಾ ಹೆಚ್, ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿ ಸೆಲ್ವಮಣಿ, ವೆಂಕಟೇಶ್ ಹೆಗಡೆ, ಹೊನ್ನಪ್ಪ . ಅರ್ಚಕ ರಾಮಾಂಜಿನೇಯ, ಮೊದಲಾದವರು ಇದ್ದರು.





















