Home ಜಿಲ್ಲೆ ಮಂಗಳೂರು ಮಾ.೨೮; ನೇತ್ರಾವತಿ ಕಿನಾರೆಯಲ್ಲಿ ‘ಉಬಾರ್ ಕಂಬಳೋತ್ಸವ’

ಮಾ.೨೮; ನೇತ್ರಾವತಿ ಕಿನಾರೆಯಲ್ಲಿ ‘ಉಬಾರ್ ಕಂಬಳೋತ್ಸವ’

ಪುತ್ತೂರು: ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ೪೦ ನೇ ವರ್ಷದ ಹೊನಲು ಬೆಳಕಿನ ‘ಉಬಾರ್ ಕಂಬಳೋತ್ಸವ’ವು ಮಾ.೨೮ ರಂದು ಉಪ್ಪಿನಂಗಡಿ ಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯಲಿದೆ.
ಗುರುವಾರ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಮಾಹಿತಿ ನೀಡಿ, ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ನಡೆಯುವ ಈ ಕಂಬಳದಲ್ಲಿ ೧೫೦ ಕ್ಕೂ ಮಿಕ್ಕಿ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಎ.೨೮ ರಂದು ಬೆಳಗ್ಗೆ ೯.೩೧ ಕ್ಕೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಉದ್ಘಾಟನೆ ನೆರವೇರಿಸಲಿದ್ದು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಲಿತಾ, ಉದ್ಯಮಿ ಧನ್ಯಕುಮಾರ್ ಬಿಳಿಯೂರುಗುತ್ತು, ಪ್ರವೀಣ್ ಕುಮಾರ್ ಕದಿಕ್ಕಾರುಬೀಡು ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ಸಭಾ ಕಾರ್ಯಕ್ರಮವು ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಭಾಪತಿ ಯು.ಟಿ. ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ಹಲವು ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸನ್ಮಾನ
ಈ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದ ಎಸ್.ಕೆ. ಆನಂದ್, ಕಂಬಳ ಕ್ಷೇತ್ರದ ಸದಾಶಿವ ಸಾಮಾಗಿ ಸಂಪಿಗೆದಡಿ, ಕಂಬಳ ಹಾಗೂ ಶಿಲ್ಪಶಾಸ್ತ್ರದ ಸೇವೆಗಾಗಿ ಬೆಳ್ಳಿಪ್ಪಾಡಿ ಕೊಡಪೊಟ್ಯ ಸುರೇಶ್ ಕೃಷ್ಣಯ್ಯ ಆಚಾರ್ಯ ಅವರಿಗೆ ಸನ್ಮಾನ ನಡೆಯಲಿದೆ. ರಾಷ್ಟ್ರೀಯ ಜೂನಿಯರ್ ಕಬಡ್ಡಿ ಚಾಂಪಿಯನ್ಶಿಪ್ ಆಟಗಾರ ಅಧೀಶ್ ಶೆಟ್ಟಿ ಬರೆಮೇಲು ಅವರಿಗೆ ಅಭಿನಂದನೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಸಂಘಟನಾ ಕಾರ್ಯದರ್ಶಿ ಯೋಗೀಶ್ ಎಸ್. ಸಾಮಾನಿ, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆ
ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ನಟರಾದ ವಶಿಷ್ಟ ಸಿಂಹ, ಸುಕೃತಾ ನಾಗ್, ಸ್ವರಾಜ್ ಶೆಟ್ಟಿ, ಸನಿಲ್ ಗುರು, ಅರವಿಂದ ಬೋಳಾರ್, ಪುಷ್ಪರಾಜ್ ಬೊಳ್ಳಾರ್, ಭವ್ಯ ಪೂಜಾರಿ ಭಾಗವಹಿಸಲಿದ್ದಾರೆ.
ಬಹುಮಾನಗಳು ಕನೆ ಹಲಗೆ ವಿಭಾಗ ಪ್ರಥಮ: ಒಂದೂವರೆ ಪವನ್ ದ್ವಿತೀಯ: ೧ ಪವನ್ ಅಡ್ಡ ಹಲಗೆ ವಿಭಾಗ ಪ್ರಥಮ: ೧ ಪವನ್ ದ್ವಿತೀಯ: ಅರ್ಧ ಪವನ್ ಹಗ್ಗ ಹಿರಿಯ ವಿಭಾಗ ಪ್ರಥಮ: ಒಂದೂವರೆ ಪವನ್ ದ್ವಿತೀಯ: ೧ ಪವನ್ ಹಗ್ಗ ಕಿರಿಯ ವಿಭಾಗ ಪ್ರಥಮ: ೧ ಪವನ್ ದ್ವಿತೀಯ: ಅರ್ಧ ಪವನ್ ನೇಗಿಲು ಹಿರಿಯ ವಿಭಾಗ ಪ್ರಥಮ: ಒಂದೂವರೆ ಪವನ್ ದ್ವಿತೀಯ: ೧ ಪವನ್ ನೇಗಿಲು ಕಿರಿಯ ವಿಭಾಗ ಪ್ರಥಮ: ೧ ಪವನ್ ದ್ವಿತೀಯ: ಅರ್ಧ ಪವನ್ ಕನೆಹಲಗೆ ವಿಭಾಗದಲ್ಲಿ ಭಾಗವಹಿಸಿದ ಎಲ್ಲಾ ಕೋಣಗಳ ಯಜಮಾನರಿಗೆ ವಿಜಯ-ವಿಕ್ರಮ ಟ್ರೋಫಿ ನೀಡಿ ಗೌರವಿಸಲಾಗುವುದು (ಬಹುಮಾನ ನಿಶಾನೆಗೆ ನೀರು ಹಾಯಿಸಿದಲ್ಲಿ ಮಾತ್ರ)