
ಸಂಜೆವಾಣಿ ವಾರ್ತೆ
ಹನೂರು: ಫೆ.16:- ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ವೈಭವೀ ಕರಣಗೊಂಡ ಮಹಾಶಿವರಾತ್ರಿ ಜಾಗರಣೆ ಉತ್ಸವದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಜೊತೆ ಗೂಡಿ ಕಲಾ ಸಂಸ್ಕೃತಿಯನ್ನು ಶಾಸಕ ಎಂ. ಆರ್ ಮಂಜುನಾಥ್ ರವರು ಭಾಗವಹಿಸಿ ಸಂಭ್ರಮಿಸಿದರು.
ಚಾ. ನಗರ ಜಿಲ್ಲೆ ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ಮಹದೇಶ್ವರರು ನೆಲೆಸಿರುವ ಪ್ರಖ್ಯಾತ ದೇಗುಲದಲ್ಲಿ ಶನಿವಾರದಿಂದ ಪ್ರಾರಂಭವಾದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ. ಮೊದಲ ದಿನ ಮಾದಪ್ಪನಿಗೆ ವಿಶೇಷ ಪೂಜೆಗಳು ನಡೆದವು. ಆಗಮಿಸಿದ ಲಕ್ಷಾಂತರ ಮಂದಿ ಭಕ್ತರು ದೇಗುಲಕ್ಕೆ ಭೇಟಿ ನೀಡಿ, ಮಾದಪ್ಪನ ದರ್ಶನ ಪಡೆದರು.
ಭಕ್ತ ಸಾಗರ: ಐದು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಹಬ್ಬದಲ್ಲಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಹೊಂದಿರುವ ಭಕ್ತರಲ್ಲಿ ಅಚಲ ದೃಢ ನಿರ್ಧಾರ ಪೂರ್ವಿಕರ ನಂಬಿಕೆಯನ್ನು ಉಳಿಸಲು ಮಾದಪ್ಪನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬಂದಿತ್ತು. ದೇಗುಲದ ಆವರಣ ಸೇರಿದಂತೆ ಎತ್ತ ನೋಡಿದರೂ ಕಣ್ಣು ಹಾಯಿಸಿದಷ್ಟು ದೂರ ಭಕ್ತರು ತುಂಬಿ ತುಳುಕುತ್ತಿದ್ದರು. ಎಲ್ಲೆಡೆ ಮಹದೇಶ್ವರನ ನಾಮ ಸ್ಮರಣೆ ಅನುರಣಿಸುತ್ತಿತ್ತು.
ಜಾತ್ರೆ ಆರಂಭಕ್ಕೂ ಮುನ್ನವೇ ನಾಡಿನ ಹಲವು ಭಾಗಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಬಂದು ಕ್ಷೇತ್ರದಲ್ಲಿ ಬಿಡಾರ ಹೂಡಿದ್ದಾರೆ. ದೇಗುಲದ ಪ್ರಾಂಗಣ, ಸಾಲೂರು ಮಠದ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಬಿಡಾರ ಹೂಡಿರುವ ಭಕ್ತರು ಮಹಾ ರಥೋತ್ಸವದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ರಾಜ್ಯದ ನಾನಾ ಬಾಗಗಳಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ.
ಸಾಲೂರು ಮಠದ ಶ್ರೀಗಳಾದ ಶಾಂತಮಲ್ಲಿ ಕಾರ್ಜುನ ಸ್ವಾಮಿ ಮತ್ತು ಶಾಸಕ ಎಂಆರ್ ಮಂಜುನಾಥ್ ರವರು ರಾತ್ರಿ ನಡೆದ ಮಹಾಶಿವರಾತ್ರಿ ಜಾಗರಣೆಯಲ್ಲಿ ಇಡೀ ರಾತ್ರಿ ಪೂರ್ತಿ ಭಾಗವಹಿಸಿದರು. ವಿವಿಧ ಕಲಾ ತಂಡಗಳಿಂದ ಗ್ರಾಮೀಣ ಸೊಗಡು ಜಾನಪದ ಕಲೆ ಹಾಡುಗಾರಿಕೆ ನೃತ್ಯ ಕಲಾ ಸಂಸ್ಕೃತಿ ಧರ್ಶನವನ್ನು ಕಣ್ತುಂಬಿಕೊಂಡರು. ಇವರ ಜೊತೆ ಮಾದಪ್ಪ ಲಕ್ಷಾಂತರ ಭಕ್ತರು ಶ್ರೀಗಳು ಮತ್ತು ಶಾಸಕರ ಅನುಯಾಯಿಗಳು ಕೂಡ ರಾತ್ರಿ ಜಾಗರಣೆಯಲ್ಲಿ ಭಾಗವಹಿಸಿದ್ದರು.
ಜಾಗರಣೆ ಮುಗಿದ ಬಳಿಕ ಸಾಲೂರು ಮಠದ ಶ್ರೀಗಳು ಶಾಸಕ ಮಂಜುನಾಥ್ ಜಿಲ್ಲಾಧಿಕಾರಿ ರೂಪ ಬೇಡಗಂಪನ ಅರ್ಚಕರು ಸಮ್ಮುಖದಲ್ಲಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಾದಪ್ಪ ಸ್ವಾಮಿಗೆ ಬಂಗಾರದ ಕಿರೀಟ ಧಾರಣೆ ಮಾಡಿ ಪೂಜೆ ಸಲ್ಲಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಶ್ರೀರೂಪ, ಪ್ರಾಧಿಕಾರ ಕಾರ್ಯಧರ್ಶಿ ರಘು ಕೊಳ್ಳೇಗಾಲ ಡಿವ?ಎಸ್ಪಿ ಧರ್ಮೇಂದ್ರ, ಹಾಗೂ ಮುಖಂಡರಾದ ಡಿ ಆರ್ ಮಾದೇಶ್, ಮಂಜೇಶ್ , ಚಿನ್ನವೆಂಕಟ್, ವಿಜಯ್ ಕುಮಾರ್, ಕೃಷ್ಣ, ಎಸ್ ಆರ್ ಮಹದೇವ್, ಸೇರಿದಂತೆ ಇನ್ನಿತರರು ಇದ್ದರು.






























