Home ಸಿನೆಮಾ ಮತ್ತೊಮ್ಮೆ ಬಾಲಿವುಡ್‌ನತ್ತ ಇಂದ್ರಜಿತ್ ಲಂಕೇಶ್ ಚಿತ್ತ

ಮತ್ತೊಮ್ಮೆ ಬಾಲಿವುಡ್‌ನತ್ತ ಇಂದ್ರಜಿತ್ ಲಂಕೇಶ್ ಚಿತ್ತ

‘ಜೈ ಹಿಂದ್ ಜೈ ಸಿಂಧ್’ ಚಿತ್ರಕ್ಕೆ ಆಕ್ಷನ್ ಕಟ್


ಕನ್ನಡ ಚಿತ್ರರಂಗದಲ್ಲಿ ಹಲವು ವಿಭಿನ್ನ ಚಿತ್ರಗಳನ್ನು ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇದೀಗ ಬಾಲಿವುಡ್‌ನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅವರು ನಿರ್ದೇಶಿಸುತ್ತಿರುವ ಹೊಸ ಹಿಂದಿ ಚಿತ್ರ ‘ಜೈ ಹಿಂದ್ ಜೈ ಸಿಂಧ್’ ಈಗ ಅಂತಿಮ ಹಂತದ ಚಿತ್ರೀಕರಣದಲ್ಲಿದ್ದು, ಉತ್ತರಾಖಂಡದಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ.


ಇತ್ತೀಚೆಗೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮತ್ತು ಮೊದಲ ಪತ್ರಿಕಾಗೋಷ್ಠಿ ಅದ್ದೂರಿಯಾಗಿ ನಡೆಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ನಟರು ಆಕಾಶಾ ವತ್ಸ್, ವಿಕ್ರಂ ಕೊಚ್ಚರ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ಸ್ಯಾಮೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸ್ಯಾಮಿ ನನ್ವಾನಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೊಚ್ಚರ್, ಜರೀನಾ ವಹಾಬ್, ಜಯಪ್ರದಾ, ಉಪಾಸನಾ ಸಿಂಗ್, ಅಮಿತ್ ಬಹಲ್ ಮುಂತಾದ ಅನುಭವೀ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಚಿತ್ರದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ.


ಚಿತ್ರದ ಕಥೆಯ ಬಗ್ಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, “ಇದು ಪ್ರೇಮಕಥೆಯಾದರೂ ಅದರ ಹಿನ್ನೆಲೆಯಾಗಿ ದೇಶ ವಿಭಜನೆಯ ಘಟನೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಸಿಂಧ್ ಪ್ರಾಂತ್ಯದ ಜನರು ವಿಭಜನೆಯ ಸಮಯದಲ್ಲಿ ಅನುಭವಿಸಿದ ನೋವು ಮತ್ತು ನಂತರ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡರು ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಅನೇಕತೆಯಲ್ಲಿ ಏಕತೆ ಎಂಬ ಸಂದೇಶವನ್ನು ಈ ಕಥೆ ಒಳಗೊಂಡಿದೆ” ಎಂದು ಹೇಳಿದರು.


ಹೊಸ ಪ್ರತಿಭೆಗಳನ್ನು ಪರಿಚಯಿಸುವುದು ತಮ್ಮ ಚಿತ್ರಗಳ ವಿಶೇಷತೆ ಎಂದು ಹೇಳಿದ ಅವರು, “ವಸುಂಧರಾ ದಾಸ್ ಅವರನ್ನು ‘ಲಂಕೇಶ್ ಪತ್ರಿಕೆ’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸಿದ್ದೆ. ಹಾಗೆಯೇ ದೀಪಿಕಾ ಪಡುಕೋಣೆ ಅವರನ್ನು ‘ಐಶ್ವರ್ಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದೆ. ಈಗ ‘ಜೈ ಹಿಂದ್ ಜೈ ಸಿಂಧ್’ ಚಿತ್ರದ ಮೂಲಕ ನಾಲ್ವರು ಹೊಸ ಕಲಾವಿದರನ್ನು ಪರಿಚಯಿಸುತ್ತಿದ್ದೇನೆ” ಎಂದು ಹೇಳಿದರು.


ಸದ್ಯ ಚಿತ್ರ ಅಂತಿಮ ಹಂತದ ಚಿತ್ರೀಕರಣದಲ್ಲಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಈ ವರ್ಷದ ಮಧ್ಯಭಾಗದಲ್ಲಿ ‘ಜೈ ಹಿಂದ್ ಜೈ ಸಿಂಧ್’ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.