
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.22: ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೆ, ಕಲೆ, ಸಂಸ್ಕೃತಿ ಆಟದಲ್ಲಿಯೂ ತೊಡಗಿಸಿಕೊಂಡರೆ ಮಾನಸಿಕ ಸ್ಥೈರ್ಯದಿಂದ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಲೋಕಸಭಾ ಸದಸ್ಯ ಈ.ತುಕರಾಂ ಹೇಳಿದರು.
ಅವರು ಇಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಹಮ್ಮಿಕೊಂಡಿದ್ದ 2 ನೇ ವಾರ್ಷಿಕೊತ್ಸವವನ್ನು ಉದ್ಘಾಟಿಸಿ ಮಾತಮಾಡುತ್ತಿದ್ದರು.
ಪ್ರಕೃತಿಯನ್ನು ಪ್ರೀತಿ ಮಾಡಿ, ನಾಟಕಗಳ ಮೂಲಕ ಸತ್ಯ ಧರ್ಮದಿಂದ ನಡೆಯಬೇಕು ಎಂಬುದನ್ನು ಅರಿಯಬೇಕಿದೆಂದರು. ರಾಘವ, ದೊಡ್ಡನಗೌಡ ಮೊದಲಾದವರು ಮೂಲಕ ಬಳ್ಳಾರಿ ಜಿಲ್ಲೆ ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ, ಬರುವ ಡಿಸೆಂಬರ್ ನಲ್ಲಿ ಬಳ್ಳಾರಿ ಉತ್ಸವ ನಡೆಸೋಣ ಎಂದರು.
ಗಾದಿಗನೂರು, ಪಿ.ಕೆ.ಹಳ್ಳಿ, ಕುಡುತಿನಿ, ತೋರಣಗಲ್ಲು ರೈಲ್ವೇಸ್ಟೇಷನ್ ಮೇಲ್ದರ್ಜೆಗೇರಿಸಲಿದೆ. ಬಳ್ಳಾರಿಯ ಮೋತಿ ರೈಲ್ವೇ ಓವರ್ ಬ್ರಿಡ್ಜ್ ಅಭಿವೃದ್ಧಿ ಮಾಡಲಿದೆ. ವೇಣಿವೀರಾಪುರದಿಂದ ಸುಧಾಕ್ರಾಸ್ ವರೆಗೆ ಚತುಷ್ಪಥ ರಸ್ತೆ, 160 ಕೋಟಿ ರೂ ವೆಚ್ಚದಲ್ಲಿ ಇಎಸ್ ಐ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಸಧ್ಯದಲ್ಲೇ ಕಾಮಗಾರಿ ಆರಂಭಿಸಲಿದೆಂದು ಹೇಳಿದರು.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ ಹೆಚ್ಚುತ್ತಿದೆ. ಇದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಕಲಾ ಪ್ರಕಾರ ಬಳಸಿಕೊಳ್ಳುವ ಚಿಂತನೆ ಇದೆಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಈಗ ಇರುವ ರಂಗಮಂದಿರ ನಿರ್ಮಾಣ ಮಾಡಿ 30 ವರ್ಷಗಳಿಗೂ ಹೆಚ್ಚು ವರ್ಷಗಳಾಗಿದೆ. ಇದನ್ನು ಪುನರುಜ್ಜೀವನ ಮಾಡುವ ಬದಲಿಗೆ ಪಕ್ಕದಲ್ಲೇ ಖಾಲಿ ಇರುವ ನಿವೇಶನದಲ್ಲಿ ಅಧುನಿಕ ಮಾದರಿಯ ಬೃಹತ್ ರಂಗ ಮಂದಿರವನ್ನು ಕೆಎಂಇಆರ್ ಸಿ ಅನುದಾನದಲ್ಲಿ ನಿರ್ಮಿಸಲು ಎಲ್ಲಾ ಜನಪ್ರತಿನಿಧಿಗಳು ಸಹಕಾರ ಮಾಡಬೇಕಿದೆಂದರು.
ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕಸಾಪದ ಆಡಳಿತ ಅಧಿಕಾರಿಗಳು ಮೇ ಅಂತ್ಯ ಇಲ್ಲ ಜೂನ್ ಆರಂಬವದಲ್ಲಿ 88 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ನಡೆಸುತ್ತಿದೆಂದು ಹೇಳಿದ್ದಾರೆ. 69 ವರ್ಷಗಳ ನಂತರ ಬಳ್ಳಾರಿಯಲ್ಲಿ ನಡೆಯುವ ಈ ಸಮ್ಮೇಳನ ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದರು.
ಗುತ್ತಿಗೆದಾರ ಮಸೀದಿಪುರ ಚಂದ್ರಶೇಖರಗೌಡ ಮಾತನಾಡಿ, ಕಲಾವಿದರಿಗೆ ಮತ್ತಷ್ಟು ಸಹಕಾರ ಬೇಕು. ಯೂತ್ ಸ್ಪೋರ್ಟ್ಸ್ ಹಾಸ್ಟಲ್ ಗಳಂತೆ, ಆರ್ಟ್ಸ್ ಹಾಸ್ಟಲ್ ಗಳು ಆಗಬೇಕು ಎಂದರು.
ಸುಭದ್ರಮ್ಮ ಮನ್ಸೂರು ಪ್ರಶಸ್ತಿಯನ್ನು ” ಸಾಧು ರಾಯಪ್ಪ” ಅವರಿಗೆ ನೀಡಿ ಗೌರವಿಸಲಾಯ್ತು.
ಸನಾರಂಭದಲ್ಲಿ, ಹಿರಿಯ ಲೆಕ್ಕ ಪರಿಶೋಧಕ ಎಸ್.ಪನ್ನರಾಜ್ , ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ರಾಜಶೇಖರ, ಕಾಂಗ್ರೆಸ್ ಮುಖಂಡರಾದ, ವೆಂಕಟೇಶ್ ಹೆಗಡೆ, ಅಲುವೇಲು ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಮೊದಲಾದವರು ಇದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಕಲಾವಿದರ ಸಂಘದ ಅಧ್ಯಕ್ಷ ಶಂಕರಬಂಡೆ ಯಲ್ಲನಗೌಡ ನೆರವೇರಿಸಿದರು.






























