
ಮಂಗಳೂರು- ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಮಂಗಳೂರು ತಾಲೂಕಿನಲ್ಲಿ ಇಂತಹ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅವುಗಳ ಜನನ ನಿಯಂತ್ರಣ ಸೇರಿದಂತೆ ಸೂಕ್ತ ಕ್ರಮ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಾಯಿ ಕಡಿತ, ಹಾವು ಕಡಿತ ಮತ್ತಿತರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೀಡಬೇಕಾದ ಚುಚ್ಚುಮದ್ದು ಹಾಗೂ ಇತರೆ ಅಗತ್ಯ ಔಷಧಿಗಳನ್ನು ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಸಂಗ್ರಹಿಸಿಡಬೇಕು. ಸಾರ್ವಜನಿಕರು ಇಂತಹ ಪ್ರಕರಣಗಳಲ್ಲಿ ವಿಳಂಭಿಸದೆ, ಆದಷ್ಟು ಬೇಗನೇ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ೨೦೨೩ರಲ್ಲಿ ೨೦೪೮೭, ೨೦೨೪ರಲ್ಲಿ ೨೦೦೭೧ ಹಾಗೂ ೨೦೨೫ರಲ್ಲಿ ೨೭೪೮೧ ಸಾರ್ವಜನಿಕರಿಗೆ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಬೀದಿ ನಾಯಿ ಮತ್ತು ಸಾಕು ನಾಯಿಗಳೆರಡೂ ಇವೆ. ೨೦೨೫ರಲ್ಲಿ ವರದಿಯಾದ ಪ್ರಕರಣಗಳಲ್ಲಿ ೨೧೬೭೩ ಪ್ರಕರಣಗಳು ಸಾಕು ನಾಯಿಗಳಿಂದ ಹಾಗೂ ೫೮೦೮ ಪ್ರಕರಣಗಳು ಬೀದಿ ನಾಯಿಗಳಿಂದ ಸಂಭವಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಕಳೆದ ೩ ವರ್ಷಗಳಲ್ಲಿ ನಾಯಿ ಕಡಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದರು.
ಇಲಿ ಜ್ವರ ಪ್ರಕರಣಗಳು ಕೂಡಾ ಜಿಲ್ಲೆಯಲ್ಲಿ ವರದಿಯಾಗಿವೆ. ೨೦೨೩ರಲ್ಲಿ ೨೦೩, ೨೦೨೪ರಲ್ಲಿ ೨೮೩ ಹಾಗೂ ೨೦೨೫ರಲ್ಲಿ ೨೬೫ ಪ್ರಕರಣಗಳು ವರದಿಯಾಗಿವೆ. ಇದರಿಂದ ೨೦೨೩ ಮತ್ತು ೨೪ರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದರು.
ಹಾವು ಕಡಿತದಿಂದ ೨೦೨೩ರಲ್ಲಿ ೩೬೫, ೨೦೨೪ರಲ್ಲಿ ೬೨೭ ಹಾಗೂ ೨೦೨೫ರಲ್ಲಿ ೭೫೨ ಪ್ರಕರಣಗಳು ವರದಿಯಾಗಿವೆ. ಕಳೆದ ೩ ವರ್ಷಗಳಲ್ಲಿ ಜಿಲ್ಲೆಯಲ್ಲಿ ೧೦ ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದು ಡಾ. ನವೀನ್ಚಂದ್ರ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ನಾಯಿ ಮತ್ತು ಹಾವು ಕಡಿತಕ್ಕೊಳಗಾದ ಸಂತ್ರಸ್ತರು ಚಿಕಿತ್ಸೆ ಪಡೆಯಲು ವಿಳಂಭಿಸುವುದರಿಂದ ಆರೋಗ್ಯ ಸ್ಥಿತಿ ಗಂಭೀರಗೊಳ್ಳಲು ಕಾರಣವಾಗುತ್ತಿದೆ. ಆದರೆ, ಪ್ರಸ್ತುತ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಹೆಚ್ಚಿರುವುದರಿಂದ ಇಂತಹ ಪ್ರಕರಣಗಳಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದರು.
ಸಭೆಯಲ್ಲಿ ಪಶುಸಂಗೋಪನೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಮತ್ತಿತರರು ಇದ್ದರು.























