ಪರವಾನಗಿ ಭೂಮಾಪಕರ ಹಲವು ಬೇಡಿಕೆಗಳನ್ನು ಆಗ್ರಹಿಸಿ ಎಡಿಎಲ್‌ಆರ್‌ಗೆ ಮನವಿ

ಸರಕಾರ ಬೇಡಿಕೆಗಳನ್ನು ಈಡೇರಿಸುವ ತನಕ ಅನಿರ್ದಿಷ್ಟಾವಧಿ ಮುಷ್ಕರ
ಸುಳ್ಯ:ಖಾಯಂಮಾತಿ ಮತ್ತು ಸಮಾನ ಕೆಲಸಕ್ಕೆ ಸಮಾನವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘದ ಸುಳ್ಯ ಘಟಕದಿಂದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಜನೀಶ್ ಎಸ್. ರವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ೨೫ ವರ್ಷಗಳಿಂದ ದ.ಕ ಜಿಲ್ಲೆಯ ಎಲ್ಲಾ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರವಾನಗಿ ಭೂಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇದುವರೆಗೂ ನಾವು ಇಲಾಖೆಯಲ್ಲಿ ಮಾಡಿರುವ ಕೆಲಸಗಳಿಗೆ ನಿಗದಿತ ಸಂಭಾವನೆ ಸಿಗುತ್ತಿಲ್ಲ. ನಮಗೆ ಸೇವಾ ಭದ್ರತೆ ಯಾವುದೂ ಇಲ್ಲ, ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಹೀಗಿದ್ದರೂ ನಾವು ಇಲಾಖೆಯಿಂದ ಸೂಚನೆ ನೀಡುವ ಪೋಡಿ ಮುಕ್ತ ಅಭಿಯಾನ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ದೇವಸ್ಥಾನ, ಕೆರೆ ಅಳತೆ, ದರ್ಖಾಸ್ತು ನೋಡಿ ಆಫ್‌ಲೈನ್ ಮತ್ತು ಆನ್‌ಲೈನ್, ಪೋಡಿ ಮುಕ್ತ ಅಭಿಯಾನ, ಸ್ವಾಮಿತ್ವ ಯೋಜನೆ, ಆಕಾರ್ ಬಂದ್ ಡಿಜಿಟೈಜೇಶನ್ ಮತ್ತು ಇನ್ನೂ ಇತರೇ ಕೆಲಸಗಳನ್ನು ಮಾಡಲು ಪರವಾನಗಿ ಪಡೆದ ಭೂ ಮಾಪಕರನ್ನು ಬಳಸಿಕೊಂಡು ಈ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳಲಾಗಿದೆ. ನಮಗೆ ಸರಿಯಾಗಿ ಸಂಭಾವನೆ ನೀಡದಿರುವುದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಈ ಬಗ್ಗೆ ಈ ಹಿಂದೆ ಅನೇಕ ಬಾರಿ ಸರಕಾರ ಹಾಗೂ ಇಲಾಖೆಗೂ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ.
ನಮ್ಮ ನಿರ್ದಿಷ್ಟ ಬೇಡಿಕೆಗಳಾದ ಖಾಯಂಮಾತಿ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಪರವಾನಗಿ ಭೂಮಾಪಕರನ್ನು ಸರಕಾರಿ ಸೇವೆಯಲ್ಲಿ ಸಕ್ರಮಗೊಳಿಸುವವರೆಗೂ ಯಾವುದೇ ರೀತಿಯ ಅಳತೆ ಕೆಲಸಗಳನ್ನು ಮಾಡುವುದಿಲ್ಲ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮ್ಮ ಲಾಗಿನ್‌ನಲ್ಲಿ ಇರುವ ಮೋಜಿನಿ ತಂತ್ರಾಂಶದ ಹೊರತುಪಡಿಸಿ ಇತರೆ ಕೆಲಸಗಳನ್ನು ಪರವಾನಗಿ ಭೂ ಮಾಪಕರಿಗೆ ನೀಡಿರುವ ಕಡತಗಳನ್ನು ಹಿಂಪಡೆಯಬೇಕು. ಪರವಾನಗಿ ಭೂ ಮಾಪಕರ ರಾಜ್ಯ ಸಂಘ ಮುಷ್ಕರಕ್ಕೆ ಕರೆ ನೀಡಿದ್ದು ದ.ಕ ಜಿಲ್ಲೆಯ ಎಲ್ಲಾ ತಾಲೂಕಿನ ಪರವಾನಗಿ ಭೂಮಾಪಕರು ರಾಜ್ಯ ಸಂಘದಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಸುಳ್ಯ ಸಂಘ ಬೆಂಬಲ ನೀಡಬೇಕಾಗಿರುವುದರಿಂದ ರೈತರಿಗೆ ನಮ್ಮಿಂದ ತೊಂದರೆ ಆಗದಂತೆ ಇತರೆ ಕೆಲಸಗಳಿಗೆ ನಿಯೋಜಿಸಿರುವ ಕಡತಗಳನ್ನು ಕೂಡಲೇ ಹಿಂಪಡೆದುಕೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘದ ಅಧ್ಯಕ್ಷ ವಿಕ್ರಾಂತ್ ಶಿರಾಜೆ, ಕಾರ್ಯದರ್ಶಿ ತೇಜಸ್ ಕೊಯಿಂಗಾಜೆ, ಜಿಲ್ಲಾ ಸಂಘದ ಖಜಾಂಜಿ ಮಣಿ ಪ್ರಸಾದ್ ಬಲ್ಕಾಡಿ ಹಾಗೂ ಸದಸ್ಯರಾದ ತೀರ್ಥೇಶ್, ಕೇಶವ ಉಪಸ್ಥಿತರಿದ್ದರು.