
ಪುತ್ತೂರು: ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದಲ್ಲಿ ಬಾಲರಾಮನ ಮಂದಿರ ಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿ ರಾಮ ಮಂದಿರದ ಜ್ಯೋತಿ ದಕ್ಷಿಣ ಕನ್ನಡಕ್ಕೆ ಆಗಮಿಸಲಿದೆ. ರಾಮ ನವಮಿಯಂದು ಜ್ಯೋತಿ ಅಯೋಧ್ಯೆಯಿಂದ ಹೊರಟು ಜಿಲ್ಲೆಗೆ ಆಗಮಿಸಲಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ತಾಲೂಕಿನ ಹನುಮಗಿರಿ ಪಂಚಮುಖಿ ಆಂಜನೇಯ- ಕೋದಂಡರಾಮ ಮಂದಿರದಲ್ಲಿ ಏ.೯ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಸೋಮವಾರ ನಡೆದ ಶ್ರೀರಾಮ ನಾಮ ತಾರಕ ಜಪ ಯಜ್ಞ ದೀಕ್ಷಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಯೋಧ್ಯೆಯಿಂದ ಜ್ಯೋತಿ ತಂದು ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಮನೆಮನೆಗಳಿಗೆ ಶ್ರೀರಾಮ ಜ್ಯೋತಿ ನೀಡಲು ನಿರ್ಧರಿಸಲಾಗಿದೆ. ಇದು ದೇಶದಲ್ಲೇ ಮೊದಲ ಪ್ರಯೋಗವಾಗಿದೆ. ರಾಮನವಮಿ ದಿನ ತಲುಪುವಂತೆ ಅಯೋಧ್ಯೆಗೆ ಹನುಮಗಿರಿಯಿಂದ ಭಕ್ತರ ತಂಡ ತೆರಳಲಿದೆ. ಇದೇ ವೇಳೆ ಕೊಪ್ಪಳ ಜಿಲ್ಲೆಯ ಆಂಜನೇಯ ಕ್ಷೇತ್ರದಿಂದ ಹನುಮ ಜ್ಯೋತಿಯೂ ಆಗಮಿಸಲಿದೆ. ಎರಡು ಜ್ಯೋತಿಗಳನ್ನು ಬಂಟ್ವಾಳದ ಮೂಲಕ ಪುತ್ತೂರಿಗೆ ತರಲಾಗುತ್ತದೆ. ೧೨ ವರ್ಷಗಳಿಂದ ಹನುಮಗಿರಿಯಲ್ಲಿ ಆಂಜನೇಯನ ಜತೆ ಶ್ರೀರಾಮನ ಉಪಾಸನೆ ನಡೆಯುತ್ತಿದೆ. ಭಾರತ ಮಾತೆಗೆ ಗೌರವ ಕೊಡುವ ನಿಟ್ಟಿನಲ್ಲಿ ಇಲ್ಲಿ ಭಾರತ ಮಾತಾ ಮಂದಿರ ಸ್ಥಾಪಿಸಲಾಗಿದೆ. ಪ್ರತೀ ಮನೆಯಿಂದ ೨ ತೆಂಗಿನಕಾಯಿ ಸಮರ್ಪಣೆ ಅಪೇಕ್ಷಿಸಲಾಗಿದೆ. ಏ.೯ರವರೆಗೂ ಮುಂದುವರಿಯಲಿದೆ. ದೇವಳದ ಬ್ರಹ್ಮಕಲಶದ ಜತೆ ಸಮಾಜದ ಬ್ರಹ್ಮಕಲಶವೂ ಆಗಬೇಕು. ನಮ್ಮೊಳಗಿನ ಅಸ್ಪೃಶ್ಯತೆ ದೂರವಾಗಬೇಕೆಂಬ ನಿಟ್ಟಿನಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಉತ್ಸವ ನಡೆಸಲಾಗುತ್ತಿದೆ ಎಂದವರು ಹೇಳಿದರು.
ನಾಳಿಕೇರ ಸಮರ್ಪಣೆಗೆ ಚಾಲನೆ
ಹನುಮಗಿರಿ ಪಂಚಮುಖಿ ಆಂಜನೇಯ- ಕೋದಂಡರಾಮ ಕ್ಷೇತ್ರದಲ್ಲಿ ಏಪ್ರಿಲ್ ೯ರಿಂದ ೧೨ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರೀರಾಮ ನಾಮ ತಾರಕ ಜಪ ಯಜ್ಞ ದೀಕ್ಷೆ ಮತ್ತು ಲಕ್ಷೋತ್ತರ ನಾಳಿಕೇರ ಸಮರ್ಪಣೆ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ನಡೆಯಿತು. ಹನುಮಗಿರಿ ಬ್ರಹ್ಮಕಲಶೋತ್ಸವಕ್ಕಾಗಿ ರಚಿಸಲಾದ ೬೦ ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಮನೆ ಮನೆಗಳಿಂದ ಸಂಗ್ರಹಿಸಲಾದ ತೆಂಗಿನಕಾಯಿಗಳನ್ನು ಮೆರವಣಿಗೆ ಮೂಲಕ ತಂದು ಸೋಮವಾರ ಕ್ಷೇತ್ರದಲ್ಲಿ ಸಮರ್ಪಿಸಲಾಯಿತು.
ಜಪ ದೀಕ್ಷೆ:
ಕೋದಂಡರಾಮ ಸನ್ನಿಧಿಯಲ್ಲಿ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಶ್ರೀರಾಮ ತಾರಕ ಯಜ್ಞ ಆರಂಭಗೊಂಡಿತು. ಇದಾದ ಬಳಿಕ ಶ್ರೀರಾಮ ನಾಮ ತಾರಕ ಜಪ ಯಜ್ಞ ಗ್ರಾಮ ಸಂಚಾಲಕರುಗಳಿಗೆ ಜಪ ದೀಕ್ಷೆ ನೀಡುವ ಕಾರ್ಯಕ್ರಮ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಒಟ್ಟು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳ ಮೂಲಕ ವಿವರಿಸಿದರು. ಹಿರಿಯ ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಶ್ರೀರಾಮ ನಾಮ ತಾರಕ ಜಪ ಯಜ್ಞದ ಮಹತ್ವದ ಬಗ್ಗೆ ವಿವರಿಸಿದರು. ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ ಉಪಸ್ಥಿತರಿದ್ದರು. ಪುರೋಹಿತ ಕಶೆಕೋಡಿ ಸೂರ್ಯನಾರಾಯಣ ಭಟ್ ಭಕ್ತರಿಗೆ ಜಪ ದೀಕ್ಷೆ ನೀಡಿದರು.






























