ಜ.೧೨-೧೩; ವಿವೇಕಾನಂದದಲ್ಲಿ ‘ವಿವೇಕಾನಂದ ಜಯಂತಿ’ ೨೦ ಸಾವಿರ ಕಂಠಗಳ ಸಮೂಹ ಗಾಯನ- ಶತ ಜಯಘೋಷ್

oplus_2

ಪುತ್ತೂರು; ಯುವಜನತೆ ಮತ್ತು ದೇಶಭಕ್ತಿ ಚಿಂತನೆಯಡಿಯಲ್ಲಿ ರಾಷ್ಟ್ರೀಯತೆಯನ್ನು ಯುವಜನತೆಯಲ್ಲಿ ಉದ್ದೀಪನ ಮಾಡುವ ಉದ್ದೇಶದೊಂದಿಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.೧೨ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಲಿದೆ. ಮೊತ್ತ ಮೊದಲ ಬಾರಿಗೆ ಈ ಕಾರ್ಯಕ್ರಮದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಕಂಠದಲ್ಲಿ ಮೂಡಿಬರುವ ಸಮೂಹ ಗಾಯನ ಹಾಗೂ ಶತ ಜಯಘೋಷ್ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆ ವಿವೇಕಾನಂದರ ಜಯಂತಿಯನ್ನು ಪ್ರತೀ ವರ್ಷ ಅದ್ದೂರಿಯಿಂದ ನಡೆಸಿಕೊಂಡು ಬರುತ್ತಿದೆ. ಜ.೧೨ರಂದು ಬೆಳಿಗ್ಗೆ ೯.೩೦ಕ್ಕೆ ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ದಕ್ಷಿಣ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಭಾಗಿಯಾಗಲಿದ್ದಾರೆ.
೨೦ಸಾವಿರ ಕಂಠಗಳ ಸಮೂಹಗಾಯನ
ವಂದೇ ಮಾತರಂ ಗೀತೆಯ ೧೫೦ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ವಂದೇ ಮಾತರಂ ಗೀತೆ ಹಾಗೂ ೪ ದೇಶಭಕ್ತಿ ಹಾಡುಗಳನ್ನು ವಿವೇಕಾನಂದ ಕಾಲೇಜಿನ ಆವರಣದಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಹಾಗೂ ಗ್ರಾಮಾಂತರ ಶಾಲೆಗಳಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಹಾಡಲಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಸ್ಮರಣೀಯಗೊಳಿಸುವ ಹಿನ್ನಲೆಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಸಂಘ ಶತಾಬ್ಧಿ ನೃತ್ಯ ರೂಪಕ ; ಬೆಳಿಗ್ಗೆ ೧೧.೩೦ರಿಂದ ೧ ಗಂಟೆಯ ತನಕ ಸಂಘ ಶತಾಬ್ಧಿ ಅಂಗವಾಗಿ ಸಂಘ ಬೆಳೆದುಬಂದ ಪರಿಯನ್ನು ನೃತ್ಯರೂಪಕದ ರೂಪದಲ್ಲಿ ಪ್ರಸ್ತುತ ಪಡಿಸಲಾಗುವುದು. ಇದರಲ್ಲಿ ವಿವಿಧ ನೃತ್ಯಗಳು ಹಾಡುಗಳು ಹಾಗೂ ನಾಟಕವನ್ನು ಅಳವಡಿಸಿಕೊಳ್ಳಲಾಗಿದೆ.
ಜ.೧೩; ಶತ ಜಯಘೋಷ್
ವಿದ್ಯಾರ್ಥಿಗಳಲ್ಲಿ ಸಾಮೂಹಿಕತೆ ತರುವ ಚಿಂತನೆಯಡಿಯಲ್ಲಿ ಪುತ್ತೂರು ನಗರದಲ್ಲಿ ಮೊದಲ ಬಾರಿಗೆ ವಿವೇಕಾನಂದ ವಿದ್ಯಾಸಂಸ್ಥೆಗಳ ೧೫೦೦ ವಿದ್ಯಾರ್ಥಿಗಳ ಶತ ಜಯಘೋಷ್ ಕಾರ್ಯಕ್ರಮ ನಡೆಯಲಿದೆ. ೪೦ ಮಂದಿ ವಿದ್ಯಾರ್ಥಿಗಳ ತಂಡದಂತೆ ೧೫ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಭಾಗವಹಿಸುವ ಪ್ರತೀ ಮಕ್ಕಳು ಸಂಗೀತ ಪರಿಕರಗಳನ್ನು ಹೊಂದಿರುತ್ತಾರೆ. ಪ್ರತೀ ತಂಡದ ಎದುರುಭಾಗದಲ್ಲಿ ೪ ಭಗವಾಧ್ವಜ ಅದರ ಹಿಂದೆ ಓರ್ವ ಪ್ರಮುಖ್ ಘೋಷ್ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಜಯಘೋಷ್ ಮಧ್ಯದಲ್ಲಿ ಭಾರತಮಾತೆಯ ಟ್ಯಾಬ್ಲೊ ಇರಲಿದೆ. ೬ನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳು ಇದರಲ್ಲಿ ಭಾಗವಹಿಸಲಿದ್ದಾರೆ. ಕೊಂಬೆಟ್ಟು ಹಾಗೂ ಕಲ್ಲಾರೆ ಬಳಿಯಿಂದ ಏಕಕಾಲಕ್ಕೆ ಹೊರಡುವ ಈ ಶತ ಜಯಘೋಷ್ ಶ್ರೀಧರ್ ಭಟ್ ಅಂಗಡಿಯ ಮುಂಭಾಗದಲ್ಲಿ ಒಟ್ಟಾಗಿ ಸೇರಲಿವೆ. ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ೫ ನಿಮಿಷ ವಿವಿಧ ಸಂಗೀತ ವಾದ್ಯಗಳ ನುಡಿಸುವ ಮೂಲಕ ಜಯಘೋಷ್ ಸಂಪನ್ನಗೊಳ್ಳಲಿದೆ.
ಗೋಷ್ಟಿಯಲ್ಲಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ, ಕೋಶಾಧಿಕಾರಿ ಎಚ್.ಅಚ್ಚುತ ನಾಯಕ್, ನಿರ್ದೇಶಕಿ ಡಾ.ಸುಧಾ ಎಸ್ ರಾವ್, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್ ಬೊಟ್ಯಾಡಿ ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಉಪಸ್ಥಿತರಿದ್ದರು.