ಜಿಲ್ಲಾ ಪಂಚಾಯತ ಕಟ್ಟಡ ಮಂಜೂರಾತಿ: ಸಿಎಂ, ಸಚಿವರಿಗೆ ಅಭಿನಂದನೆ

ಕಲಬುರಗಿ,ಫೆ.9-ಕಲಬುರಗಿ ಜಿಲ್ಲಾ ಪಂಚಾಯತಗೆ ಪಂಚಾಯತ್ ವ್ಯವಸ್ಥೆ ಆರಂಭದಿಮದಲು ಅಂದರೆ 1986 ರಿಂದ ಸ್ವಂತ ಕಟ್ಟಡ ಇಲ್ಲದೆ ನಗರದ ಜಗತ್ ವೃತ್ತದಲ್ಲಿರುವ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಪಂಚಾಯತಿಗೆ 4 ದಶಕಗಳ ನಂತರ ಸ್ವಂತ ಕಟ್ಟಡ ಹೊಂದುವ ಯೋಗ ಇದೀಗ ಕೂಡಿ ಬಂದಿದೆ.
ಗುರುವಾರ ಜರುಗಿದ ಸಚಿವ ಸಂಪುಟ ಸಭೆಯಲ್ಲಿ 49.65 ಕೋಟಿ ಅಂದಾಜು ಮೊತ್ತದ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು ಇದಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಜಿಲ್ಲಾ ಪಂಚಾಯತಿಯ ಪ್ರತಿನಿಧಿಯಾದ ವಿಕಾಸ ಸಜ್ಜನ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಕಾಳಜಿ ಹಾಗೂ ಸತತ ಪ್ರಯತ್ನದ ಪರಿಣಾಮ ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿಗೆ ಸ್ವಂತ ಕಟ್ಟಡ ಪಡೆಯುವ ಭಾಗ್ಯ ಒದಗಿ ಬಂದಿದೆ ಮತ್ತು ಇವರೊಂದಿಗೆ ಸತತವಾಗಿ ಸಂಪರ್ಕ ಸಾಧಿಸಿ ಸಚಿವರ ಮಾರ್ಗದರ್ಶನಂತೆ ಕೆಲಸ ನಿರ್ವಹಿಸಿರುವ ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರಸಿಂಗ್ ಮೀನಾ ಅವರಿಗೆ ಜಿಲ್ಲಾ ಪಂಚಾಯತ ಸಮಸ್ತ ಅಧಿಕಾರಿ/ಸಿಬ್ಬಂದಿಗಳ ಪರವಾಗಿ ಹೃತ್ಪೂರ್ವಕ ಅಭಿನಂದೆನಗಳು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿ/ಸಿಬ್ಬಂದಿಗಳು ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.