ಯುವ ಸಮುದಾಯ ಸಮಾಜ ಮುಖಿ ಕಾರ್ಯಕ್ಕೆ ಮಠಾಧೀಶರ ಪ್ರೇರಣೆ ಅಗತ್ಯ

ಕಲಬುರಗಿ: ಡಿ.19:ಸಂಸ್ಕಾರಯುತ ಮೌಲ್ಯಗಳನ್ನು ಬಲಪಡಿಸುವಲ್ಲಿ ಅದರಲ್ಲೂ ಯುವ ಸಮುದಾಯ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಮಠಾಧೀಶರ ಹಾಗೂ ಸಮುದಾಯದ ನಿಷ್ಠಾವಂತ ಕಾರ್ಯಕರ್ತರ ಬಹು ಅಗತ್ಯವಾಗಿದೆ ಎಂದು ಬಡದಾಳದ ಡಾ. ಚೆನ್ನಮಲ್ಲ ಶಿವಾಚಾರ್ಯರು ಹೇಳಿದರು.

ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಮಹಾಂತೇಶ್ವರ ವಿರಕ್ತ ಮಠಕ್ಕೆ ನಿಯೋಜನೆಗೊಂಡ ಷಡಕ್ಷರಿ ದೇವರು ಅವರ ಪುರ ಪ್ರವೇಶ ಹಾಗೂ ಸ್ವಾಗತ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನೆಗೆ ಕುಟುಂಬದ ಯಜಮಾನ ಮುಖ್ಯಸ್ಥನಾಗಿ ಮನೆಯನ್ನು ಮುನ್ನೆಡೆಸುವಂತೆ ಗ್ರಾಮದಲ್ಲಿರುವ ಮಠಕ್ಕೂ ಸ್ವಾಮೀಜಿಯೊಬ್ಬರು ಮಠಾಧೀಶರಾಗಿ ಸಮಾಜ ಬಲಪಡಿಸುವಲ್ಲಿ ಅದರಲ್ಲೂ ಸಾಮಾಜಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ಕಾರ್ಯವೂ ಸಹ ಮಹತ್ವದ್ದಾಗಿದೆ ಎಂದು ವಿವರಣೆ ನೀಡಿದರು.

ಚಿಣಮಗೇರಾ ಮಹಾಂತೇಶ್ವರ ಮಠದ ಕಿರಿಯ ಮಠಾಧೀಶರಾದ ವೀರಮಹಾಂತ ಶಿವಾಚಾರ್ಯರು ಸಹ ಮಾತನಾಡಿ, ಜೀವನದಲ್ಲಿ ಸಂಸ್ಕಾರ, ಒಳ್ಳೆಯ ನಡತೆ ಹಾಗೂ ವಿಶಾಲ ಮನೋಭಾವವಿದ್ದಲ್ಲಿ ಬದುಕಿಗೆ ಅರ್ಥ ಬರುತ್ತದೆ. ಭೈರಾಮಡಗಿ ಗ್ರಾಮ ಮಾದರಿಯಾಗಿದೆ. ಗ್ರಾಮದ ಸಮುದಾಯ ಅಭಿವೃದ್ಧಿಗೆ ತಮ್ಮ ಸದಾ ಬೆಂಬಲವಿದೆ ಎಂದು ಹೇಳಿದರು.

ಪುರಪ್ರವೇಶ ಮಾಡಿದ ಷಡಕ್ಷರಿ ದೇವರು ಅವರು ಗ್ರಾಮಸ್ಥರ ಸ್ವಾಗತ ಸ್ವೀಕರಿಸಿ ಮಾತನಾಡಿ, ಎಲ್ಲರೂ ಸಮಾಜ ಸೇವಕರು, ಅದರಲ್ಲಿ ತಾವೊಬ್ಬರು. ಅವರವರು ಕಾರ್ಯ ಅರಿತು ನಡೆದರೆ ಯಾವುದೇ ಬೇಧ ಭಾವ ಬಾರದು. ಸ್ವಾಮಿ ಎಂದರೆ ಸಮಾಜದ ಒಡೆಯವನಲ್ಲ. ಸಮಾಜದ ನಿಷ್ಠಾವಂತ ಸೇವಕ ಎಂದು ಮಾರ್ಮಿಕವಾಗಿ ನುಡಿದರು. ನಿಂಬರ್ಗಾದ ಶಿವಲಿಂಗ ಮಹಾಸ್ವಾಮಿಗಳು, ಮೇಳಕುಂದಾ ಬಿಯ ಶಶಿಕುಮಾರ ದೇವರು ಸಹ ಹಾಜರಿದ್ದರು.

ಗ್ರಾಮದ ಮುಖಂಡರಾದ ಶರಣಗೌಡ ಎ. ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಯುವಕರಲ್ಲಿಂದು ಮೌಲ್ಯಗಳನ್ನು ಬಲಪಡಿಸುವಲ್ಲಿ ಮಠಾಧೀಶರ ಪಾತ್ರ ಬಹು ಅಗತ್ಯವಾಗಿದೆ. ಸಮಾಜ ಸಂಘಟನೆ ಬಲಗೊಂಡಲ್ಲಿ ಏನೆಲ್ಲ ಸಾಧಿಸಬಹುದು ಎಂದು ವಿವರಣೆ ನೀಡಿದರು. ನಿವೃತ್ತ ಶಿಕ್ಷಕ ಶಾಮರಾವ ಪೆÇೀದ್ದಾರ ಸ್ವಾಗತಿಸಿದರು. ಪತ್ರಕರ್ತ ಹಣಮಂತರಾವ ಭೈರಾಮಡಗಿ ವಂದಿಸಿದರು.

ಮೆರವಣಿಗೆ: ಷಡಕ್ಷರಿ ದೇವರು ಭೈರಾಮಡಗಿ ಪ್ರವೇಶವನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿಕೊಂಡರಲ್ಲದೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.