
ಬೆಂಗಳೂರು,ಫೆ.೨೮-ಅಲ್ಪಾಯುಷಿ ಎಂದು ಹೇಳಿದ ಜ್ಯೋತಿಷಿಯ ಭವಿಷ್ಯಕ್ಕೆ ಹೆದರಿದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ನಡೆದಿದೆ.
ಎಂಇಐ ಲೇಔಟ್‌ನ ವಿದ್ಯಾಜ್ಯೋತಿ (೨೯) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ಕಂಪನಿಯೊಂದರಲ್ಲಿ ಮಾಡುತ್ತಿದ್ದ ಆಕೆ ಮನೆಯಲ್ಲೇ ಕೆಲಸ (ವರ್ಕ್ ಫ್ರಂ ಹೋಮ್) ಮಾಡುತ್ತಿದ್ದರು.
ವಿದ್ಯಾಜ್ಯೋತಿಗೆ ಜ್ಯೋತಿಷಿಯೊಬ್ಬರು ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದರು. ಹೀಗಾಗಿ ಮನೆಯವರು, ಅಪ್ಪ, ಅಮ್ಮ ಮಗಳ ಆಸೆಯಂತೆ ಎಲ್ಲವನ್ನೂ ಮಾಡಿದ್ದರು. ಜೊತೆಗೆ ಕೊಡಗು ಮೂಲದ ಯುವಕನನ್ನು ಪ್ರೀತಿಸುತ್ತಿದ್ದ ವಿದ್ಯಾ ಇಷ್ಟದಂತೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿ, ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು.
ಇನ್ನೂ ಜ್ಯೋತಿಷಿ ೯ ದಿನ ಪೂಜೆ ಮಾಡಲು ಸೂಚಿಸಿದ್ದರು. ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ಮನೆಯಲ್ಲಿ ನಡೆಯುತ್ತಿತ್ತು. ಕೊನೆಯ ದಿನವಾದ್ದರಿಂದ ಮಾರಮ್ಮ ದೇವರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದರು. ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಊಟದ ನಂತರ ವಿದ್ಯಾ ರೂಂಗೆ ಹೋಗಿದ್ದಳು. ಸಂಜೆ ತಾಯಿ ಕೂಗಿದ್ದರೂ ಕೂಡ ವಿದ್ಯಾ ಹೊರಬಂದಿರಲಿಲ್ಲ.
ಕೆಲಸ ಮಾಡುತ್ತಿರಬೇಕೆಂದು ಎಲ್ಲರೂ ಸುಮ್ಮನಾಗಿದ್ದರು. ರಾತ್ರಿ ೮ ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕರೆದಿದ್ದರು. ಬಾಗಿಲನ್ನು ತೆಗೆಯದೇ ಇದ್ದಾಗ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






























