
ಬೆಂಗಳೂರು, ಮಾ. ೩೦- ಹೊಸ ಆರ್ಥಿಕ ವರ್ಷದ ಮೊದಲ ದಿನವೇ ರಾಜ್ಯದ ಜನತೆಗೆ ವಿದ್ಯುತ್ ಹಾಗೂ ನೀರಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಏಇಖಅ) ಏಪ್ರಿಲ್ ೧ರಿಂದ ಹೊಸ ದರ ಜಾರಿಗೆ ತರುವ ಬಗ್ಗೆ ಅಂತಿಮ ಹಂತದ ಚರ್ಚೆಯಲ್ಲಿ ತೊಡಗಿದೆ.
ಯೂನಿಟ್‌ಗೆ ೪೦x೫೦ ಪೈಸೆ ಹೆಚ್ಚಳ ಸಾಧ್ಯತೆ ಇದ್ದು. ಬೆಸ್ಕಾಂ (ಃಇSಅಔಒ) ಸೇರಿದಂತೆ ಐದು ಎಸ್ಕಾಂಗಳ ಪ್ರಸ್ತಾವನೆಯಂತೆ ಪ್ರತಿ ಯೂನಿಟ್ ವಿದ್ಯುತ್‌ಗೆ ಸುಮಾರು ೪೦ ರಿಂದ ೫೦ ಪೈಸೆವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳು ಆದಾಯದ ಕೊರತೆ ಸರಿಪಡಿಸಲು ಈ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ವಾದಿಸಿದ್ದಾರೆ.
ಯಾರಿಗೆ ಪರಿಣಾಮ?
ಗೃಹ ಬಳಕೆದಾರರು, ವಾಣಿಜ್ಯ ಬಳಕೆದಾರರು, ಕೈಗಾರಿಕಾ ಕ್ಷೇತ್ರ ಈ ಮೂರು ವರ್ಗಗಳಿಗೂ ದರ ಏರಿಕೆಯ ನೇರ ಪರಿಣಾಮ ಬೀಳಲಿದೆ.
ಗೃಹ ಜ್ಯೋತಿ ಫಲಾನುಭವಿಗಳಿಗೆ ವಿನಾಯಿತಿ
‘ಗೃಹ ಜ್ಯೋತಿ’ ಯೋಜನೆಯಡಿ ೨೦೦ ಯೂನಿಟ್ ಒಳಗೆ ವಿದ್ಯುತ್ ಬಳಸುವ ಗ್ರಾಹಕರ ಬಿಲ್ ಅನ್ನು ಸರ್ಕಾರವೇ ಭರಿಸುವುದರಿಂದ ಅವರಿಗೆ ನೇರ ಹೊರೆ ಇರುವುದಿಲ್ಲ. ಆದರೆ ೨೦೦ ಯೂನಿಟ್ ಮೀರಿದ ಬಳಕೆದಾರರು ಹೆಚ್ಚಿದ ದರವನ್ನು ಪಾವತಿಸಬೇಕಾಗುತ್ತದೆ.
ಸ್ಥಿರ ಶುಲ್ಕವೂ ಏರಿಕೆ ಸಾಧ್ಯತೆ
ಯೂನಿಟ್ ದರ ಮಾತ್ರವಲ್ಲದೆ, ಸ್ಥಿರ ಶುಲ್ಕವನ್ನೂ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ವಾಣಿಜ್ಯ ವಿದ್ಯುತ್ ದರ ಏರಿಕೆಯಾದರೆ ಹೋಟೆಲ್, ಸಣ್ಣ ಕೈಗಾರಿಕೆಗಳ ಉತ್ಪಾದನಾ ವೆಚ್ಚ ಹೆಚ್ಚಾಗಿ, ಅದರ ಪರಿಣಾಮವಾಗಿ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ ಇದೆ..
ನೀರಿನ ದರವೂ ಏರಿಕೆ ?
ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಏಪ್ರಿಲ್ ೧ರಿಂದ ಬೆಂಗಳೂರಿನಲ್ಲಿ ನೀರಿನ ಬಿಲ್ಲಿನಲ್ಲೂ ಶೇ. ೩ರಷ್ಟು ಹೆಚ್ಚಳ ಜಾರಿಗೆ ಬರಲಿದೆ.
ನೀರಿನ ಸರಬರಾಜು ವೆಚ್ಚ ಹೆಚ್ಚಳ, ನಿರ್ವಹಣಾ ವೆಚ್ಚ ಏರಿಕೆ, ವಿದ್ಯುತ್ ಮತ್ತು ಮೂಲಸೌಕರ್ಯ ಖರ್ಚು ಹೆಚ್ಚಳ, ಜಲಮಂಡಳಿಯ ಆರ್ಥಿಕ ಒತ್ತಡ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷವೇ ಪ್ರತಿವರ್ಷ ನೀರಿನ ದರವನ್ನು ಶೇ. ೩ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದ್ದು, ಅದರ ಭಾಗವಾಗಿ ಈ ವರ್ಷದ ಏರಿಕೆ ಜಾರಿಯಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಏಪ್ರಿಲ್ ೧ರಿಂದ ವಿದ್ಯುತ್ ಹಾಗೂ ನೀರಿನ ದರ ಏರಿಕೆಯಿಂದ ಬೆಂಗಳೂರಿನ ಜನತೆಗೆ ದ್ವಿಗುಣ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ನಡುವೆಯೇ ಈ ದರ ಏರಿಕೆ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ.































