
ಸಿಂದಗಿ,ಅ.25-ಪಟ್ಟಣದ ಡಾಕ್ಟರ್ ಎಸ್.ಜಿ.ಬೊಮ್ಮಣ್ಣಿ ರಸ್ತೆಯ ಜನನಿಬೀಡ ಪ್ರದೇಶದಲ್ಲಿ ಪತಿ ಮಹಾಶಯನೊಬ್ಬ ಮಾರಕಾಸ್ತ್ರದಿಂದ ಪತ್ನಿಯ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ದೇವರ ಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮದ ಅನುಸೂಬಾಯಿ ಯಮನಪ್ಪ ಮಾದರ್ (50) ಹಲ್ಲೆಗೊಳಗಾದ ಮಹಿಳೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಮತ್ತೊಬ್ಬ ವ್ಯಕ್ತಿಯ ಜೊತೆಗೆ ಬೈಕ್‍ನಲ್ಲಿ ಹೊರಟಿದ್ದ ಪತ್ನಿಗೆ ಹಿಂದಿನಿಂದ ದಾಳಿ ಮಾಡಿದ ಪತಿ ಯಮನಪ್ಪ ಮಾದರ್ ಕಬ್ಬು ಕಡಿಯುವ ಮಾರಕಾಸ್ತ್ರದಿಂದ ಕುತ್ತಿಗೆ ಮತ್ತು ತಲೆಗೆ ಹೊಡೆದಿದ್ದರಿಂದ ಅವಳು ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡಿದಳು. ತಕ್ಷಣ ನೆರವಿಗೆ ಬಂದ ವ್ಯಕ್ತಿಯೊಬ್ಬ ಪತಿ ಯಮನಪ್ಪನಿಗೂ ಬಡಿಗೆಯಿಂದ ಹೊಡೆದಿದ್ದು ಆತನಿಗೂ ಗಾಯವಾಗಿದೆ. ಈಗ ಪತಿ-ಪತ್ನಿಯರಿಬ್ಬರೂ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.






























