ನಾಡಿನ ಪರಂಪರೆ, ಸಂಸ್ಕøತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ : ಸಚಿವ ಶಿವಾನಂದ ಪಾಟೀಲ

ವಿಜಯಪುರ, ಸೆ.3: ಬಸವ ನಾಡು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ನಾಡಾಗಿದ್ದು, ಸಾಂಸ್ಕೃತಿಕ ಪರಂಪರೆ ಪೂರ್ವಿಕರ ಬಳುವಳಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವÀ ಶಿವಾನಂದ ಪಾಟೀಲ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೆಪ್ಟೆಂಬರ್ 01 ರಂದು ಬಸವನ ಬಾಗೇವಾಡಿಯ ಶ್ರೀ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲೆಯ ಶ್ರೀನಂದೀಶ್ವರ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವನ ಬಾಗೇವಾಡಿ ತಹಸೀಲ್ದಾರÀ ವಾಯ್. ಎಸ್. ಸೋಮನಕಟ್ಟಿ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಯು ಮೊಬೈಲ್, ರೀಲ್ಸ್‍ನಂತಹ ಕೆಟ್ಟ ಸಂಸ್ಕೃತಿಯನ್ನು ಬಿಟ್ಟು ದೇಸಿಯ ಜಾನಪದ ಮತ್ತು ವಚನ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ ಪತ್ತಾರ ಕೊಳಲು ವಾದನ, ಮಹೇಶ್ ಭಂಟನೂರ ಸುಗಮ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಹಾರಿವಳ ಅವರು ಹಂತಿಪದ, ಈರಯ್ಯ ಹಿರೇಮಠ ಅವರು ಕಥಾ ಕೀರ್ತನಾ, ಸುನಂದಾ ಬತ್ತಾಸಿ ಅವರು ಬಸವಣ್ಣನವರ ಕುರಿತ ನೃತ್ಯವನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತÀ ಗುರುನಾಥ ದಡ್ಡೆ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀ ಬಸವೇಶ್ವರ ವೃತ್ತದಿಂದ ನಂದೀಶ್ವರ ರಂಗಮಂದಿರದವರೆಗೂ ನಡೆದ ಜಾನಪದ ಕಲಾತಂಡಗಳ ಮೆರವಣಿಗೆಯು ಕಲಾವೈಭವದಿಂದ ಜರುಗಿದ್ದು, ಅಕ್ಬರ್ ಸನದಿ ಗೊಂಬೆಕುಣಿತ, ಸಂಜೀವ ಖೋತ ಸತ್ತಿಗೆ ಕುಣಿತ, ರಮೇಶ ಪೂಜಾರಿ ಕರಡಿಮಜಲು ಪ್ರದರ್ಶನ ನೀಡಿದರು.
ಮೆರವಣಿಗೆಯಲ್ಲಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಆರಕ್ಷಕ ನಿರೀಕ್ಷಕ ಗುರುಶಾಂತ ದಾಶ್ಯಾಳ ಹಾಗೂ ಇತರರು ಭಾಗವಹಿಸಿದ್ದರು.