ಪ್ರಜಾಪ್ರಭುತ್ವದಲ್ಲಿ ಮತದಾನ ಮಹಾಶಕ್ತಿ:ಡಾ.ಗೌತಮ ಅರಳಿ

ಬೀದರ. ಜು.17: ಆಧುನಿಕ ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಮತದಾನವು ಮಹತ್ವದ ಪಾತ್ರ ವಹಿಸುತ್ತದೆ. ಮತದಾರರನ್ನು ನೋಂದಣಿಗೊಳಿಸುವ ಕುರಿತು ಜಾಗೃತಿಯಾಗಬೇಕಾಗಿದೆ. ಜಾಗೃತ ಮತದಾರರಿಂದ ಸದೃಢ, ಶಕ್ತಿಯುತ ಸರ್ಕಾರ ರಚನೆಯಾಗಲು ಸಾಧ್ಯವೆಂದು ರಾಜ್ಯ ಮಟ್ಟದ ಚುನಾವಣಾ ತರಬೇತುದಾರರಾದ ಡಾ. ಗೌತಮ ಅರಳಿಯವರು ನುಡಿದರು.
ಅವರು ಬುಧವಾರ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಪ್ರಯುಕ್ತ ಹಮ್ಮಿಕೊಂಡಿದ್ದ ‘ಮತದಾರರ ನೋಂದಣಿ ಮತ್ತು ಜಾಗೃತಿ’ ವಿಷಯದ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾರರ ಚೀಟಿ ಹೊಂದಿರಲಾರದ ಪ್ರತಿಯೊಬ್ಬರಿಗೂ ಮತದಾರರ ಗುರುತಿನ ಚೀಟಿ ಪಡೆಯುವ ಸಲುವಾಗಿ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರು ತಿಳಿಸುವ, ಜಾಗೃತಿ ನೀಡಬೇಕಾದ ಅವಶ್ಯಕತೆಯಿದೆ. ಆ ಮೂಲಕ ಆರೋಗ್ಯಕರ ಮತದಾರರ ಪಟ್ಟಿ ಸಿದ್ಧಗೊಳಿಸಲು ಸಾಧ್ಯವಾಗುತ್ತದೆ. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಸಂವಿಧಾನಾತ್ಮಕವಾಗಿ ಪಡೆದಿರುತ್ತಾರೆ. ಆದರೆ ಕೆಲವೊಮ್ಮೆ ಮತದಾರರ ಚೀಟಿ ಪಡೆಯುವಲ್ಲಿ ನಿರ್ಲಕ್ಷದಿಂದಲೋ ಅಥವಾ ಜಾಗೃತಿಯ ಕೊರತೆಯಿಂದಲೋ ಮತದಾರರ ಚೀಟಿಯನ್ನು ಹೊಂದಿರುವುದಿಲ್ಲ. ಆದ್ದರಿಂದ ಯುವಕರು ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಹೊಂದಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾರರ ಚೀಟಿ ಹೊಂದಲು ಪ್ರೇರೇಪಿಸಬೇಕೆಂದರು.
ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಿ.ಎಸ್.ಬಿರಾದಾರ ಮಾತನಾಡಿ, ಜಾಗೃತವಾದ ಮತದಾರರಿಂದ ಉತ್ತಮ ಸರ್ಕಾರ ನಿರ್ಮಿಸಲು, ಸ್ಥಾಪಿಸಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಶಕ್ತಿ, ಸಾಮಥ್ರ್ಯ ಅಪಾರವಾಗಿದೆ. ಆದರೆ ಅನೇಕ ಜನರು ಯಾವುದೋ ಕಾರಣಕ್ಕೆ ಮತದಾನದಿಂದ ವಂಚಿತರಾಗುತ್ತಾರೆ. ಮತದಾರರು ಯಾವುದೇ ಆಶೆ, ಆಮಿಷಕ್ಕೆ ಒಳಗಾಗದೆ ನಿರ್ಭೀತ ಮತದಾನ ಮಾಡಿದಾಗ ಆ ದೇಶ ಸಶಕ್ತವಾದ ಆಡಳಿತ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿರುವ ಯುವಕರ ಮೇಲೆ ತುಂಬಾ ಜವಾಬ್ದಾರಿಯಿದೆ. ಆ ನಿಟ್ಟಿನಲ್ಲಿ ಯುವಕರು ಸ್ವಯಂ ಸೇವಕರಾಗಿ ಜನಪರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಮಾತನಾಡಿ, ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದಲ್ಲಿ ಮತದಾನದ ಮೇಲೆಯೇ ಸರ್ಕಾರದ ಆಗುಹೋಗುಗಳು ನಿರ್ಧಾರವಾಗುತ್ತವೆ. ಹಾಗಾಗಿ ಸುಭದ್ರ ಸರ್ಕಾರ ನೆಲೆಗೊಳ್ಳಬೇಕಾದರೆ ನೂರು ಪ್ರತಿಶತ ಅರ್ಹ ಮತದಾರರ ಪಟ್ಟಿ ಸಿದ್ಧಗೊಳ್ಳಬೇಕಾಗಿದೆ, ಆಗ ಮಾತ್ರ ಚುನಾಯಿತ ಸರ್ಕಾರ ನಿಖರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಚುನಾವಣೆಯಲ್ಲಿ ಎಲ್ಲಾ ಅರ್ಹ ನಾಗರಿಕರು ಜವಾಬ್ದಾರಿಯಿಂದ ಮತದಾನ ಮಾಡಬೇಕಾಗಿದೆ. ಬುದ್ಧಿವಂತ ಮತದಾರರಿಂದ ಮಾತ್ರ ಸಮರ್ಥ ಸರ್ಕಾರ ಒಂದು ದೇಶ ಹೊಂದಲು ಸಾಧ್ಯವೆಂದರು.
ಬೀದರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವೀಂದ್ರನಾಥ ವಿ.ಗಬಾಡಿ ಮಾತನಾಡಿ, ಮತದಾರರಲ್ಲಿ ಅರಿವು ಮೂಡಿಸಲು ಯುವಕರ ಪಡೆ ಸಿದ್ಧಗೊಳ್ಳಬೇಕಾಗಿದೆ. ಅವರು ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಸಂತೋಷಿಮಾತಾ, ಡಾ.ಅಂಬರೀಶ ವೀರನಾಯಕ, ಡಾ.ಶಿವಕುಮಾರ ಹೂಗಾರ, ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು, ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ.ರಾಮಚಂದ್ರ ಗಣಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶರವರು ಸ್ವಾಗತಿಸಿದರು, ವಾಣಿಶ್ರೀ ಪ್ರಾರ್ಥಿಸಿದರು, ಪಂಚಶೀಲಾ ಕಾರ್ಯಕ್ರಮವನ್ನು ನಿರೂಪಿಸಿದರು.