
ಯಾದಗಿರಿ:ಫೆ.12:ತಾಲೂಕಿನ ಸೈದಾಪೂರ ಪೆÇಲೀಸ್ ಠಾಣೆ ವ್ಯಾಪ್ತಿಯ ನೀಲಹಳ್ಳಿ ಗ್ರಾಮದಲ್ಲಿ 2014ರಲ್ಲಿ ನಡೆದಿದ್ದ ಬೆಂಕಿ ಹಚ್ಚುವ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 11 ಮಂದಿಗೆ ತಲಾ 3 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ.77 ಸಾವಿರ ದಂಡ ವಿಧಿಸಲಾಗಿದೆ.
ಪ್ರಕರಣದ ವಸ್ತುನಿಷ್ಠ ಹಿನ್ನಲೆ ಪ್ರಕಾರ, 2014ರ ಮಾರ್ಚ್ 18ರಂದು ದೇವಸ್ಥಾನಕ್ಕೆ ಸೇರಿದೆ ಎನ್ನಲಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಟೇಲ್ ಮತ್ತು ಕಿರಾಣಿ ಅಂಗಡಿಗೆ ಆರೋಪಿಗಳು ಸಂಚು ರೂಪಿಸಿ ಪೆಟ್ರೋಲ್ ಚೆಲ್ಲಿ ಬೆಂಕಿ ಹಚ್ಚಿದ್ದರು. ಈ ಕೃತ್ಯದಿಂದ ಸುಮಾರು ರೂ.1.20 ಲಕ್ಷ ಮೌಲ್ಯದ ಆಸ್ತಿ ಹಾನಿಗೊಳಗಾಗಿದ್ದು, ಸಾರ್ವಜನಿಕ ಶಾಂತಿ ಭದ್ರತೆಗೆ ಧಕ್ಕೆಯುಂಟಾಗಿತ್ತು. ಈ ಕುರಿತು ಸೈದಾಪೂರ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ಅಭಿಯೋಜಕ ಪಕ್ಷವು ಸಾಕ್ಷಿದಾರರ ಹೇಳಿಕೆಗಳು, ದಾಖಲೆ ಸಾಕ್ಷ್ಯಗಳು ಹಾಗೂ ತನಿಖಾ ಅಧಿಕಾರಿಗಳ ವರದಿಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿತು. ಪರಿಗಣಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ಅಪರಾಧ ಕೃತ್ಯ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು – ಶಂಕ್ರೆಪ್ಪಗೌಡ, ಶಾಂತುರೆಡ್ಡಿ ಪೆÇಲೀಸ್ ಪಾಟೀಲ್, ಬಸನಗೌಡ ಗಿರಿಯಪ್ಪನೋರು, ಚೆನ್ನರೆಡ್ಡಿ, ರೆಡ್ಡಪ್ಪ, ಬನ್ನಪ್ಪ, ಹಣಮಂತ, ಹುಸೇನಪ್ಪ, ಮಲ್ಲಪ್ಪ, ಮಾರಾಯ ಮತ್ತು ಭೀಮಣ್ಣ – ಇವರೆಲ್ಲರೂ ನೀಲಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
ನ್ಯಾಯಾಲಯವು ಭಾರತೀಯ ದಂಡ ಸಂಹಿತೆ (IPಅ)ಯ ಕಲಂ 143 (ಅನಧಿಕೃತ ಗುಂಪುಗೂಡಿಕೆ), 147 (ದಂಗಾ), 341 (ಅಕ್ರಮವಾಗಿ ತಡೆಹಿಡಿಯುವುದು), 436 (ಬೆಂಕಿ ಹಚ್ಚಿ ಆಸ್ತಿ ನಾಶಪಡಿಸುವುದು) ಜೊತೆಗೆ 149 (ಸಾಮೂಹಿಕ ಅಪರಾಧ ಹೊಣೆ) ಅಡಿಯಲ್ಲಿ ಅಪರಾಧ ಸಾಬೀತಾಗಿದೆ ಎಂದು ಹೇಳಿ ಶಿಕ್ಷೆ ವಿಧಿಸಿದೆ.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ಸಮಗ್ರ ವಾದ ಮಂಡಿಸಿ ಆರೋಪ ಸಾಬೀತಾಗುವಂತೆ ನ್ಯಾಯಾಲಯಕ್ಕೆ ನೆರವಾದರು.























