ಉಸ್ಮಾನ್ ನಿಧನ: ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ,ಡಿ.೧೯- ಕಳೆದ ವಾರ ಗುಂಡೇಟಿಗೆ ಬಲಿಯಾದ ಪ್ರಮುಖ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರ್ಕಾರದ ವಿರುದ್ದ ಆಕ್ರೋಶ ಭುಗಿಲೆದ್ದಿದ್ದು ದುಷ್ಕರ್ಮಿಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ ಅವರನ್ನು ಹಿಂತಿರುಗಿಸುವ ತನಕ ಭಾರತೀಯ ರಾಯಭಾರ ಕಚೇರಿ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದೆ.

ಢಾಕಾದ ಕೇಂದ್ರ ಬಿಜೋಯ್‌ನಗರ ಪ್ರದೇಶದಲ್ಲಿ ಷರೀಫ್ ಉಸ್ನಾನ್ ಹಾದಿ ಪ್ರಚಾರ ನಡೆಸುತ್ತಿದ್ದಾಗ, ಮುಸುಕುಧಾರಿ ಬಂದೂಕುಧಾರಿಗಳು ಅವರ ತಲೆಗೆ ಗುಂಡು ಹಾರಿಸಿದ್ದರು. ಡಿಸೆಂಬರ್ ೧೫ ರಂದು ಅವರನ್ನು ಸಿಂಗಾಪುರ ಜನರಲ್ ಆಸ್ಪತ್ರೆ (ಎಸ್‌ಜಿಹೆಚ್) ನರಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು ನಿನ್ನೆ ಮೃತರಾಗಿದ್ದಾರೆ.

ಇಂಕ್ವಿಲಾಬ್ ಮಂಚ್ ಸಂಚಾಲಕರೂ ಆಗಿದ್ದ ಷರೀಫ್ ಉಸ್ಮಾನಿ ಹಾದಿ ಅವರು ಫೆಬ್ರವರಿಯಲ್ಲಿ ನಡೆಯಲಿರುವ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿಯಾಗಿದ್ದರು. ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಎಸ್ ಜಿ ಎಚ್ ಮತ್ತು ರಾಷ್ಟ್ರೀಯ ನರವಿಜ್ಞಾನ ಸಂಸ್ಥೆಯ ವೈದ್ಯರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ, ಷರೀಫ್ ಹಾದಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ವಿದೇಶಾಂಗ ಸಚಿವಾಲಯ ಸಿಂಗಾಪುರದಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ಗೆ ಷರೀಫ್ ಹಾದಿ ಮೃತದೇಹವನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲು ನೆರವು ನೀಡಿದೆ ಎಂದು ಸಿಂಗಾಪುರದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಷರೀಫ್ ಉಸ್ಮಾನಿಯ ಹಾದಿ ಸಾವು ಬಾಂಗ್ಲಾದೇಶದಾದ್ಯಂತ ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿದ್ದು ಢಾಕಾ ವಿಶ್ವವಿದ್ಯಾಲಯದ ಆವರಣದ ಬಳಿ ನೂರಾರು ಜನರು ಮತ್ತು ವಿದ್ಯಾರ್ಥಿಗಳು ಜಮಾಯಿಸಿ “ನೀನು ಯಾರು, ನಾನು ಹಾದಿ, ಹಾದಿ” ಎಂಬ ಘೋಷಣೆಗಳನ್ನು ಕೂಗಿ ದುಷ್ಕರ್ಮಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆಯ ಸಮಯದಲ್ಲಿ, ವಿಶೇಷವಾಗಿ ನ್ಯಾಷನಲ್ ಸಿಟಿಜನ್ ಪಾರ್ಟಿ ನಿಂದ ಕೆಲವು ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾರಂಬಿಸಿದ್ದು. ಹಾದಿಯ ಮೇಲೆ ಹಲ್ಲೆ ನಡೆಸಿದವರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ., ಅವರನ್ನು ಹಿಂತಿರುಗಿಸುವವರೆಗೆ ಭಾರತೀಯ ಹೈಕಮಿಷನ್ ಅನ್ನು ಮುಚ್ಚುವಂತೆ ಮಹಮ್ಮದ್ ಯೂನಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಧ್ಯಂತರ ಸರ್ಕಾರ, ಭಾರತ ಹಾದಿ ಹಂತಕರನ್ನು ಹಿಂದಿರುಗಿಸುವವರೆಗೆ, ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನ್ ಮುಚ್ಚಿರುತ್ತದೆ. ಎಂದು ಎನ್‌ಸಿಪಿ ನಾಯಕ ಸರ್ಜಿಸ್ ಆಲ್ಮ್ ಹೇಳಿದ್ದಾರೆ

ಕೆಲವು ಪ್ರತಿಭಟನಾಕಾರರು ಢಾಕಾದಲ್ಲಿರುವ ಬಾಂಗ್ಲಾ ಪತ್ರಿಕೆ ಪ್ರೋಥೋಮ್ ಅಲೋ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನಾಕಾರರು ಕಚೇರಿಯ ಹೊರಗೆ ಬೆಂಕಿ ಹಚ್ಚಿದ್ದು, ಕೆಲವು ಪತ್ರಕರ್ತರು ಕಟ್ಟಡದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ರಾಜ್‌ಶಾಹಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅವಾಮಿ ಲೀಗ್‌ನ ಕಚೇರಿಗೂ ಬೆಂಕಿ ಹಚ್ಚಲಾಗಿದೆ ಎಂದು ತಿಳಿಸಲಾಗಿದೆ.