Home ಮುಖಪುಟ ಸುದ್ದಿ ರಷ್ಯಾ ತೈಲ ಖರೀದಿಗೆ ಅಮೆರಿಕ ಅನುಮತಿ ಗುಲಾಮಗಿರಿ

ರಷ್ಯಾ ತೈಲ ಖರೀದಿಗೆ ಅಮೆರಿಕ ಅನುಮತಿ ಗುಲಾಮಗಿರಿ

ಬೆಂಗಳೂರು, ಮಾ. ೭- ರಷ್ಯಾದಿಂದ ತೈಲ ಖರೀದಿಗೆ ಅಮೆರಿಕದ ಒಪ್ಪಿಗೆ ಪಡೆಯುವುದು ಗುಲಾಮಗಿರಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.


ಭಾರತವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಒಪ್ಪಿಗೆ ಪಡೆಯುವುದು, ೩೦ ದಿನಗಳ ವಿನಾಯ್ತಿ ನೀಡುವುದು ಸಾರ್ವಭೌಮ ರಾಷ್ಟ್ರದ ಘನತೆಯನ್ನು ಗುಲಾಮಗಿರಿ ವ್ಯವಸ್ಥೆಗೆ ವಿಶ್ವಗುರು ತಳ್ಳಿರುವ ನಿದರ್ಶನಕ್ಕೆ ಸಾಕ್ಷಿ ಎಂದು ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ೩೦ ದಿನಗಳ ವಿನಾಯ್ತಿ ನೀಡಲಾಗಿದೆ ಎಂದು ಅಮೆರಿಕದ ಸಚಿವರು ಬಹಿರಂಗವಾಗಿ ಹೇಳಿರುವುದು ಸ್ವಾತಂತ್ರ್ಯ ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತ. ಒಂದು ಸಾರ್ವಭೌಮ ರಾಷ್ಟ್ರ ತನ್ನ ಇಂಧನ ಅವಶ್ಯಕತೆಗಳನ್ನು ಯಾವ ದೇಶದಿಂದ ಪೂರೈಸಿಕೊಳ್ಳಬೇಕು ಎಂಬ ನಿರ್ಧಾರಕ್ಕೂ ಇನ್ನೊಂದು ರಾಷ್ಟ್ರದಿಂದ ವಿನಾಯ್ತಿ ಪಡೆಯಲೇಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರೆ ಅದು ಕೇವಲ ರಾಜತಾಂತ್ರಿಕ ವೈಫಲ್ಯವಲ್ಲ. ಅದು ರಾಷ್ಟ್ರದ ಆತ್ಮಗೌರವವನ್ನೇ ತುತ್ತು ಮಾಡಿದ ಆಡಳಿತದ ನಗ್ನ ಸತ್ಯ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.


ಸ್ವಾತಂತ್ರ್ಯ ನಂತರ ಭಾರತವು ಸ್ವತಂತ್ರ ವಿದೇಶಾಂಗ ಧೋರಣೆಯ ಮೂಲಕ ವಿಶ್ವದಲ್ಲಿ ಗೌರವ ಪಡೆದಿತ್ತು. ಇಂದು ಅಮೆರಿಕ ರಾಜಕೀಯ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ. ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ದೌರ್ಬಲ್ಯ ಮತ್ತು ಆತ್ಮಗೌರವ ಕುಸಿದಿರುವುದಕ್ಕೆ ಜೀವಂತ ಸಾಕ್ಷಿ ಎಂದು ಹೇಳಿದ್ದಾರೆ.


ಅಮೆರಿಕ ಸಚಿವರು ಭಾರತಕ್ಕೆ ೩೦ ದಿನಗಳ ವಿನಾಯ್ತಿ ನೀಡಲಾಗಿದೆ ಎಂದು ಜಗತ್ತಿನ ಮುಂದೆ ಹೇಳುವ ಮಟ್ಟಿಗೆ ಪರಿಸ್ಥಿತಿ ತಲುಪಿರುವುದೇ ಮೋದಿ ಸರ್ಕಾರದ ದುರ್ಬಲತೆ ಮತ್ತು ಆತ್ಮಗೌರವ ಹೀನತೆಯ ಪರಾಕಾಷ್ಠೆ. ಇದು ಕೇವಲ ರಾಜಕೀಯ ಅಪಮಾನವಲ್ಲ. ಇದು ಭಾರತದ ಸ್ವಾಭಿಮಾನವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹರಾಜು ಹಾಕಿದಂತಾಗಿದೆ ಎಂದು ಅವರು ಟೀಕಿಸಿದ್ದಾರೆ.


ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ಮಟ್ಟಿಗೆ ಕುಗ್ಗಿಸಿ ವಿಶ್ವಗುರುವಿನ ಘೋಷಣೆಗಳ ಹಿಂದೆ ರಾಜತಾಂತ್ರಿಕ ಧೀನತೆಯನ್ನು ಮುಚ್ಚಿಟ್ಟ ಪ್ರಧಾನಿಯನ್ನು ನೋಡಲು ಸಾಧ್ಯವಿಲ್ಲ. ಮಾತಿನಲ್ಲಿ ವಿಶ್ವಗುರು, ನಡೆಗಳಲ್ಲಿ ಪರಾಧೀನತೆ ತೋರುವುದು ನರೇಂದ್ರ ಮೋದಿಯ ವಿದೇಶಾಂಗ ನೀತಿಯ ವ್ಯಂಗ್ಯಾತ್ಮಕ ಸತ್ಯ ಎಂದು ಅವರು ಕಿಡಿಕಾರಿದ್ದಾರೆ.


ವಿಶ್ವಗುರು ಎಂಬ ಘೋಷಣೆಯಿಂದ ದೇಶದ ಗೌರವ ಉಳಿಯುವುದಿಲ್ಲ. ಆತ್ಮಗೌರವದಿಂದ ಸ್ವತಂತ್ರ ರಾಜತಾಂತ್ರಿ, ಧೈರ್ಯದಿಂದ ಮಾತ್ರ ರಾಷ್ಟ್ರದ ಮಾನ ಉಳಿಯುತ್ತದೆ. ಆ ಧೈರ್ಯವೇ ನರೇಂದ್ರ ಮೋದಿ ಆಡಳಿತದಲ್ಲಿ ಕಾಣೆಯಾಗಿರುವುದು ಇಂದಿನ ಭಾರತದ ಅತ್ಯಂತ ಕಹಿ ಸತ್ಯ ಎಂದು ಅವರು ಹೇಳಿದ್ದಾರೆ.