
ನವದೆಹಲಿ, ಸೆ.೫- ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೇ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇತ್ತೀಚಿನವರೆಗೂ ಒಂದೇ ಬಾರಿ ಗರಿಷ್ಠ ೧ ಲಕ್ಷ ರೂಪಾಯಿ ಪಾವತಿ ಮಿತಿ ಇತ್ತು. ಈಗ ಮಿತಿಯನ್ನು ೫ ಲಕ್ಷ ರೂಪಾಯಿಗೆ ಏರಿಸಲಾಗಿದೆ. ಜೊತೆಗೆ, ದಿನವೊಂದಕ್ಕೆ ಗರಿಷ್ಠ ೧೦ ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ.
ಈ ಹೊಸ ಪಾವತಿ ಮಿತಿಗಳು ಸೆಪ್ಟೆಂಬರ್ ೧೫ರಿಂದಲೇ ಜಾರಿಯಾಗಲಿವೆ. ತೆರಿಗೆ ಪಾವತಿ, ಸಾಲದ ಇಎಂಐ, ದೈನಂದಿನ ವಹಿವಾಟು ಮುಂತಾದ ಪ್ರಮುಖ ಹಣಕಾಸು ವ್ಯವಹಾರಗಳಲ್ಲಿ ಗ್ರಾಹಕರಿಗೆ ಇದರಿಂದ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.
ಆದರೆ, ಈ ಹೆಚ್ಚುವರಿ ಮಿತಿ ವ್ಯಾಪಾರಿಗಳಿಗೆ (ಃ೨ಃ) ಮಾಡುವ ಪಾವತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ (P೨P) ಮಾಡುವ ಪಾವತಿಗೆ ಮಿತಿಯು ಹಳೆಯದಂತೆ ೧ ಲಕ್ಷ ರೂಪಾಯಿ ಮುಂದುವರಿಯಲಿದೆ ಎಂದು ನಿಗಮ ತಿಳಿಸಿದೆ.
ಡಿಜಿಟಲ್ ಪಾವತಿಯ ಬಳಕೆಯ ಹೆಚ್ಚಳಕ್ಕೆ ಸಾಕ್ಷಿಯಾಗಿ, ಈ ವರ್ಷ ಆಗಸ್ಟ್ ತಿಂಗಳಲ್ಲಿ ೨,೦೦೦ ಕೋಟಿಗೂ ಅಧಿಕ ಯುಪಿಐ ವಹಿವಾಟುಗಳು ನಡೆದಿದ್ದು, ಇದರ ಒಟ್ಟು ಮೊತ್ತ ೨೪.೮೫ ಲಕ್ಷ ಕೋಟಿ ರೂಪಾಯಿ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ಆಗಸ್ಟ್ ತಿಂಗಳಲ್ಲಿ ಯುಪಿಐ ವಹಿವಾಟಿನಲ್ಲಿ ೩೪% ಏರಿಕೆ ದಾಖಲಾಗಿದೆ.