
ಸುಪ್ರೀಂ ಗಡುವು ಅಂತ್ಯ
ಬೆಂಗಳೂರು.ಫೆ೨೩:ಜಿಬಿಎ ವ್ಯಾಪ್ತಿಯ ವಾರ್ಡ್ ಪುನರ್‌ವಿಂಗಡಣೆಯ ಅಂತಿಮ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ಇನ್ನೂ ಮುಂದಾಗಿಲ್ಲ.
ಫೆ.೨೦ ಗಡುವು ಮೀರಿ ಮೂರು ದಿನ ಕಳೆದಿದೆ ಇದುವರೆಗೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಚಿಸಲಾದ ಐದು ನಗರ ಪಾಲಿಕೆಗಳ ೩೬೯ ವಾರ್ಡ್‌ಗಳ ಅಂತಿಮ ಡಿಲಿಮಿಟೇಷನ್ ಪಟ್ಟಿಯನ್ನು ಫೆ.೨೦ರೊಳಗೆ ಸಲ್ಲಿಸುವುದಾಗಿ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಆದರೆ ಗಡುವು ಮುಗಿದು ಮೂರು ದಿನ ಕಳೆದರೂ ಅಂತಿಮ ಪಟ್ಟಿ ಸಿದ್ಧವಾಗಿಲ್ಲ.ನಗರಾಭಿವೃದ್ಧಿ ಇಲಾಖೆಯ ಮೂಲಗಳ ಪ್ರಕಾರ
ಕೆಲವು ವಾರ್ಡ್‌ಗಳನ್ನು ಯಾವ ವ್ಯಾಪ್ತಿಗೆ ಸೇರಿಸಬೇಕು, ಯಾವ ಮಾನದಂಡದ ಆಧಾರದ ಮೇಲೆ ಪುನರ್‌ವಿಂಗಡಣೆ ಮಾಡಬೇಕು ಎಂಬ ವಿಚಾರದಲ್ಲಿ ಚಿಂತನೆ ಮುಂದುವರಿದಿದೆ. ರಾಜಕೀಯ ಲೆಕ್ಕಾಚಾರಗಳೂ ಈ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.
ಜಿಬಿಎ ಚುನಾವಣೆಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಾರ್ಚ್ ೩ ರಂದು ನಡೆಯಲಿದೆ. ಆ ವೇಳೆಗೆ ಅಂತಿಮ ಪಟ್ಟಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
ಮತ್ತೊಂದು ಮೂಲಗಳ ಪ್ರಕಾರ, ವಾರ್ಡ್ ಪುನರ್‌ವಿಂಗಡಣೆ ಕರಡು ಸಿದ್ಧವಾಗಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಅಂತಿಮ ಒಪ್ಪಿಗೆ ಬಾಕಿಯಿದೆ. ಅವರು ಪ್ರವಾಸದಲ್ಲಿ ನಿರತರಾಗಿರುವ ಕಾರಣ ಅಂತಿಮ ಮುದ್ರೆ ವಿಳಂಬವಾಗುತ್ತಿದೆ ಎನ್ನಲಾಗಿದೆ. ಒಂದೆರಡು ದಿನಗಳಲ್ಲಿ ಅವರು ಪಟ್ಟಿಯನ್ನು ಪರಿಶೀಲಿಸಿ ಅಂತಿಮಗೊಳಿಸುವ ಸಾಧ್ಯತೆ ಇದೆ.
ಇನ್ನೂ ಸರ್ಕಾರ ಅಂತಿಮ ಪುನರ್‌ವಿಂಗಡಣಾ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಬಳಿಕ ಉಳಿದ ಪ್ರಕ್ರಿಯೆ ಆಯೋಗದ ವಶದಲ್ಲಿರುತ್ತದೆ.
ಎಲ್ಲವೂ ಯೋಜನೆಯಂತೆ ನಡೆದರೆ ಮೇ ಅಂತ್ಯದೊಳಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ, ಜೂನ್ ಅಂತ್ಯದೊಳಗೆ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆ ಇದೆ.



























