
ಯಾದಗಿರಿ: ಮಾ.೨೮:ಜಿಲ್ಲೆಯ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿ ಕಾಣಿಸಿಕೊಂಡಿದ್ದು, ನಿವಾಸಿಗಳು ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಕಾಲೋನಿಯ ಚರಂಡಿಗಳು ಹಲವು ದಿನಗಳಿಂದ ಸ್ವಚ್ಛತೆ ಕಾಣದೆ ಕಸದ ಗುಡ್ಡಗಳಾಗಿ ಮಾರ್ಪಟ್ಟಿದ್ದು, ದುರ್ವಾಸನೆಯಿಂದ ಪರಿಸರವೇ ಕಲುಷಿತಗೊಂಡಿದೆ.
ಚರAಡಿ ನೀರು ಮನೆಗಳ ಮುಂದೆ ನಿಂತು, ರಸ್ತೆಗಳಲ್ಲಿ ಹರಿಯುತ್ತಿರುವುದರಿಂದ ಜನರಿಗೆ ಓಡಾಡುವುದೇ ಕಷ್ಟಕರವಾಗಿದೆ. ಮಳೆಬಿದ್ದಾಗ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತಿದ್ದು, ಅಸ್ವಚ್ಛ ಪರಿಸ್ಥಿತಿಯಿಂದ ವಿವಿಧ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ.
ಸ್ಥಳೀಯರು ಹಲವು ಬಾರಿ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. “ನಾವು ಸಾಮಾನ್ಯ ಜನರು ಅಂತ ನಮ್ಮ ಸಮಸ್ಯೆಗಳನ್ನು ಲೆಕ್ಕಿಸೋದಿಲ್ಲ. ಈ ರೀತಿ ನಿರ್ಲಕ್ಷ್ಯ ಮುಂದುವರಿದರೆ ಪರಿಸ್ಥಿತಿ ಹತಾಶಕರವಾಗುತ್ತದೆ” ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಅಸ್ವಸ್ಥತೆಗೆ ಒಳಗಾಗುತ್ತಿರುವುದರಿಂದ ಆರೋಗ್ಯದ ಆತಂಕ ಹೆಚ್ಚಾಗಿದೆ. ಕುಡಿಯುವ ನೀರು, ಸ್ವಚ್ಛತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಅಗತ್ಯಗಳು ಪೂರೈಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಠಿಣ ಕ್ರಮಕ್ಕೆ ಮುಂದಾಗುವ ಸೂಚನೆ ನೀಡಿದ್ದಾರೆ.
ತಕ್ಷಣವೇ ಸಂಬAಧಪಟ್ಟ ಇಲಾಖೆ ಚರಂಡಿ ಸ್ವಚ್ಛತೆ ನಡೆಸಿ, ಸಮರ್ಪಕ ನಿಕಾಶಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಹುರಸಗುಂಡಗಿ ಗ್ರಾಮದ ನಿವಾಸಿಗಳು ಒಗ್ಗೂಡಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದಾರೆ.
ಶೇಖರ್ ಬಡಿಗೇರ, ಯುವ ಮುಖಂಡರು





















