
ಕಲಬುರಗಿ:ಸಂಗೀತ- ಚಿತ್ರಕಲೆ ಮೊದಲಾದ ಲಲಿತ ಕಲೆಗಳ ಸಂಸ್ಕಾರ ಪ್ರಸ್ತುತ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ, ಮನುಷ್ಯನ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಕಲೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಆರ್ ಆರ್ ಬಿರಾದಾರ ಹೇಳಿದರು. ಇಲ್ಲಿನ ಸಂಗೀತ ಮತ್ತು ಲಲಿತಕಲಾ ವಿಭಾಗ ಆಯೋಜಿಸಿರುವ ಯುಗಾದಿ ಸಂಗೀತ ಚಿತ್ರಕಲಾ ಮಹೋತ್ಸವ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆಗಳು ಮನಸ್ಸಿನ ಖಿನ್ನತೆ, ಆತಂಕ ಮೊದಲಾದ ಮಾನಸಿಕ ಕಾಯಿಲೆಗಳಿಗೆ ಔಷಧಿಗಳಿದ್ದಂತೆ, ಹಾಗಾಗಿ ಎಲ್ಲರೂ ಕಲೆಗಳನ್ನು ಆರಾಧಿಸಬೇಕು, ಆಸ್ವಾದಿಸಬೇಕು. ಸಂಗೀತ ಒಂದು ಜಾಗತಿಕ ಭಾಷೆಯಾಗಿದ್ದು ಜಾತಿ, ವರ್ಗ, ವರ್ಣ ಅಥವಾ ದೊಡ್ಡವರು, ಸಣ್ಣವರು ಶ್ರೀಮಂತರು, ಬಡವರು ಎನ್ನದೆ ಎಲ್ಲರಿಗೂ ಅವಶ್ಯಕವಾಗಿದೆ. ಸಮುದಾಯಗಳನ್ನು ಒಂದುಗೂಡಿಸುವ ಶಕ್ತಿ ಸಂಗೀತಕ್ಕೆ ಇದೆ ಎಂದು ವಿವರಿಸಿದವರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಂಥಾಲಯದ ಮುಖ್ಯಸ್ಥ ಡಾ. ಪರಶುರಾಮ ಕಟ್ಟಿಮನಿಯವರು ಮಾತನಾಡಿ ಸಂಗೀತ -ಚಿತ್ರಕಲೆ ಮೊದಲಾದವುಗಳು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಬೆಳೆದು ಬಂದಿವೆ, ಎಲ್ಲರೂ ಅವುಗಳ ಸೊಗಸನ್ನು ಆಸ್ವಾದಿಸಬೇಕು, ಸಂಗೀತದಲ್ಲಿ ಒಂದು ದೈವಿಕತೆ ಇದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಉದಯ ಕಿರಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಭಾಷಾ ಮತ್ತು ಮಾನವಿಕ ನಿಕಾಯದ ಡೀನ್ ಪೆÇ್ರ ವಿಕ್ರಮ್ ವಿಸಾಜಿ ಹಾಗು ವಿಭಾಗದ ಸಂಯೋಜಕಿ ಡಾ ಜಯದೇವಿ ಜಂಗಮಶೆಟ್ಟಿ ಇದ್ದರು.
ಸಹಾಯಕ ಪ್ರಾಧ್ಯಾಪಕಿ ಡಾ. ಸಂಜನಾ ಕೌಶಿಕ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ದೃಶ್ಯ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರು, ಮತ್ತು ವಿನಾಯಕುಮಾರ್ ಹಾಗೂ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಬೋಧಕ ವರ್ಗ ಬೋಧಕೇತರ ವರ್ಗ, ಸಂಶೋಧನ ವಿದ್ವಾಂಸರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಗೀತ ಮತ್ತು ದೃಶ್ಯ ಕಲಾ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
ಆರಂಭದಲ್ಲಿ ಸಂಗೀತದ ಐಚ್ಚಿಕ ವಿಷಯದ ಸ್ನಾತಕೋತ್ತರ ವಿದ್ಯಾರ್ಥಿನಿಯರು ರಾಮ ರಾಮ ಎಂಬ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಶ್ರೀರಕ್ಷಾ ವಯೋಲಿನ್ ವಾದನ, ತಬಲಾ ವಾದನದಲ್ಲಿ ಸಂಶೋಧನ ವಿದ್ಯಾರ್ಥಿ ಗಣೇಶ ಬನಕರ ಹಾಗೂ ತಬಲಾ ಸ್ನಾತಕೋತ್ತರ ವಿದ್ಯಾರ್ಥಿ ಪ್ರಮಥ ಬಾಲಸುಬ್ರಮಣ್ಯ ನೀಡಿದರು.ಸಂಗೀತ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ರಾಣಿ ಅವರು ಬಿಹಾರಿ ಜಾನಪದ ಗೀತೆಯನ್ನು ಹಾಡಿದರು.
ಮನಸೂರೆಗೊಂಡ ಸಂಗೀತ ಸುಧೆ :
ಉದ್ಘಾಟನಾ ಸಮಾರಂಭದ ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಲಲಿತಕಲಾ ವಿಭಾಗದ ಕಲಾವಿದರು ಗಾಯನ ಮತ್ತು ತಬಲಾ ವಾದನವನ್ನು ಪ್ರಸ್ತುತಪಡಿಸಿದರು.
ವಿಭಾಗದ ಸಹ ಪ್ರಾಧ್ಯಾಪಕ ಡಾ. ಉದಯ ಕಿರಣ್ ಕೆ. ಟಿ. ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ, ಶ್ರೀ ತ್ಯಾಗರಾಜರ ರಾಮ ನೀ ಸಮಾನಮೆವರು ಎಂಬ ಖರಹರಪ್ರಿಯ ರಾಗ, ರೂಪಕ ತಾಳದ ಕೃತಿಯನ್ನು , ರಾಗಾಲಾಪನೆ, ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತ ಪಡಿಸಿದರು. ನಂತರ ರಾಮ್ ನಾಮ್ ರಸ ಪೀ ಜೇ ಎಂಬ ಮೀರಾ ಭಜನ್ ನೊಂದಿಗೆ ತಮ್ಮ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು.
ಇವರೊಂದಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ರಕ್ಷಾ ವಯೊಲಿನ್ ವಾದನ, ಸಹಾಯಕ ಪ್ರಾಧ್ಯಾಪಕ ಪಂಡಿತ್ ರವಿಕಿರಣ್ ನಾಕೋಡ್ ಅವರು ತಬಲಾ ಸಾಥ್ ನೀಡಿದರು.
ನಂತರ ಡಾ ಜಯದೇವಿ ಜಂಗಮಶೆಟ್ಟಿ ಅವರು ದುರ್ಗಾರಾಗದಲ್ಲಿ ಸಖಿ ಮೋರೆ ರೂಮ್ ಝೂಮ ಎನ್ನುವ ಝಪ್ತಾಲ ಬಂದೀಶನೊಂದಿಗೆ ದೃತ್ ಬಂದೀಶಗಳಾದ ಏರಿ ಧನ ಧನ ಹಾಗೂ ದೇವಿ ಭಜೋ ದುರುಗಾ ಭವಾನಿ ಹಾಡಿ, ಅದೇ ರಾಗದಲ್ಲಿ ತರಾನಾ ಪ್ರಸ್ತುತ ಪಡಿಸಿ ಕೇಳುಗರ ಮನಸೂರೆ ಗೊಂಡರು. ನಂತರ ಮನ ಲಾಗೊ ಯಾರ ಫಕೀರಿ ಮೈ ಎಂಬ ಕಬೀರ ಭಜನ್ ಹಾಡಿ ಕೊನೆಯಲ್ಲಿ ಬಸವಣ್ಣನವರ ಎನ್ನ ಕಾಯುವ ದಂಡಿಗೆಯ ಮಾಡಯ್ಯವಚನವನ್ನು ಹಾಡಿದರು. ಇವರಿಗೆ ತಬಲಾ ಸಂಗತ್ ನಾಡಿನ ಖ್ಯಾತ ತಬಲಾ ವಾದಕ ಪಂಡಿತ್ ಜಡೇಶ ಹೂಗಾರ ಹಾಗು ಹಾರ್ಮೋನಿಯಂ ಸಂಗತದಲ್ಲಿ ಸುಪ್ರಸಿದ್ಧ ಕಲಾವಿದ ಪಂಡಿತ್ ಬದರಿನಾಥ ಮುಡಬಿಯವರು ನೀಡಿದರು.
ನಂತರ ಹೆಸರಾಂತ ಕಲಾವಿದ ಪಂಡಿತ್ ಡಾ. ರವಿಕಿರಣ್ ನಾಕೋಡ ಅವರು ತಾಲ್ ತಿಂತಾಳದಲ್ಲಿ ಹೊಸದಾಗಿ ಎರಡು ತಬಲಾಗಳನ್ನು ಇಟ್ಟು ನುಡಿಸಿದ್ದು ವಿಶೇಷವಾಗಿದ್ದಿತು. ಇವರಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶ್ರೀರಕ್ಷ ವಯೋಲಿನ್ ಸಾಥ್ ನೀಡಿದರು.ಕೊನೆಯದಾಗಿ ಸಹಾಯಕ ಪ್ರಾಧ್ಯಾಪಕಿ ಡಾ ಸಂಜನಾ ಕೌಶಿಕ ಅವರ ಖಯಾಲ್ ಗಾಯನ ಎಲ್ಲರನ್ನೂ ಸೆಳೆಯಿತು.
ರಾಗ ಶ್ರೀಯಲ್ಲಿ ಸಂಕ್ಷಿಪ್ತವಾಗಿ ನೋಂ-ತೋಂ ಆಲಾಪಿನೊಂದಿಗೆ ಪ್ರಾರಂಭಿಸಿ, ನಂತರ ಮಧ್ಯಲಯ ಝಪ್ ತಾಳದಲ್ಲಿ ಸಂಪ್ರದಾಯಬದ್ಧ ಬಂದಿಶ ಹರಿ ಕೇ ಚರಣಕಮಲ ಹಾಗೂ ದ್ರುತ ತೀನ್ ತಾಳದಲ್ಲಿ ಚಲೋ ರೀ ಮಾಯಿ ರಾಮ-ಸಿಯಾ ದರಸನ ಕೋ ಬಂದಿಶಗಳೊಂದಿಗೆ ಖಯಾಲ ಗಾಯನವನ್ನು ಪ್ರಸ್ತುತಪಡಿಸಿದರು.
ಗಾಯನದ ಅಂತ್ಯದಲ್ಲಿ ರಾಮ ಮಂತ್ರವ ಜಪಿಸೊ ಹೇ ಮನುಜ ಎಂಬ ದೇವರನಾಮದಿಂದ ರಾಗ ಪರಮೇಶ್ವರಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಇವರಿಗೆ ಸಂವಾದಿನಿ ಸಂಗತ್ ನಲ್ಲಿ ವಿದ್ವಾನ ಡಾ. ಉದಯ ಕಿರಣ ಕೆ ಟಿ ಹಾಗೂಪಂಡಿತ ಡಾ. ರವಿಕಿರಣ ನಾಕೋಡ ಅವರು ತಬಲಾ ಸಾಥ್ ನೀಡಿದರು.




















