೧೧.೫೦ ಕೋಟಿ ಡ್ರಗ್ಸ್ ವಶ ಯುವತಿ ಸೇರಿ ಇಬ್ಬರ ಬಂಧನ

ಬೆಂಗಳೂರು,ಮಾ.೩-ಡ್ರಗ್ಸ್ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಕೇರಳದ ಯುವತಿ ಸೇರಿ ಇಬ್ಬರು ಪದವೀಧರ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೧೧.೫೦ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಕೇರಳ ಮೂಲದ ಬಾಗಲೂರಿನ ಅಶ್ವಿನ್(೨೪)ಹಾಗೂ ಮುಬೀನಾ(೨೫)ಬಂಧಿತ ಆರೋಪಿಗಳಾಗಿದ್ದಾರೆ,ಇವರಿಬ್ಬರಿಂದ ೧೧.೫೦ ಕೋಟಿ ಮೌಲ್ಯದ ೮,೩೩೫ ಎಲ್.ಎಸ್.ಡಿ ಸ್ಟ್ರಿಪ್ಸ್‌ಗಳು, ೫ ಕೆಜಿ ಹೈಡ್ರೋಗಾಂಜಾ, ೫೩೪ ಗ್ರಾಂ ಚರಸ್, ೨ ಮೊಬೈಲ್, ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಹೆಚ್.ಕೆ.ಮಹಾನಂದ್ ನೇತೃತ್ವದ ತಂಡವು ಬಾಗಲೂರು ಬಳಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧಾರದ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.


ಬಿಬಿಎ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಇವರಿಬ್ಬರು ಕಳೆದ ಒಂದು ವರ್ಷದಿಂದ ಬಾಗಲೂರಿನ ಬಳಿಯ ಪ್ರಿಸ್ಟೇಜ್ ಅಪಾರ್ಟ್‌ಮೆಂಟ್ ಫ್ಲಾಟ್ ಬಾಡಿಗೆಗೆ ತೆಗೆದುಕೊಂಡು ವಾಸವಾಗಿದ್ದು, ಥೈಲ್ಯಾಂಡ್‌ನಲ್ಲಿ ನೆಲೆಸಿರುವ ಮತ್ತೊಬ್ಬ ಕೇರಳ ಮೂಲದ ವ್ಯಕ್ತಿಯು ಕಳುಹಿಸಿಕೊಡುವ ನಿಷೇಧಿತ ಮಾದಕ ವಸ್ತುಗಳನ್ನು ಆತನ ನಿರ್ದೇಶನದಂತೆ ಗಿರಾಕಿಗಳಿಗೆ ತಲುಪಿಸಿ ಅಕ್ರಮ ಹಣ ಸಂಪಾದನೆ ಮಾಡುವ ವ್ಯವಸ್ಥಿತ ಕೃತ್ಯದಲ್ಲಿ ತೊಡಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತರ ವಿರುದ್ದ ಬಾಗಲೂರು ಠಾಣೆಯಲ್ಲಿ ಎನ್‌ಡಿಪಿಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಲಾಗಿದೆ.


ಇದಲ್ಲದೆ ಇದೇ ತಂಡವು ಕಲೆಹಾಕಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ, ವಿದೇಶದಿಂದ ಅಂಚೆ ಮೂಲಕ ಪಾರ್ಸೆಲ್ ತರಿಸಿಕೊಳ್ಳಲಾಗಿದ್ದ ೧.೫ ಕೆಜಿ ಹೈಡ್ರೋಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ.


ಆರೋಪಿಗಳು ಯಾರಿಗೂ ಅನುಮಾನ ಬಾರದಿರಲಿ ಎಂದು ಚಾಕಲೇಟ್ ಮತ್ತು ಬಿಸ್ಕೆಟ್ ಬಾಕ್ಸ್ ಗಳಲ್ಲಿ ಹೈಡ್ರೋ ಗಾಂಜಾವನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿರುತ್ತಾರೆ.


ವಶಪಡಿಸಿಕೊಳ್ಳಲಾಗಿರುವ ಹೈಡ್ರೋ ಗಾಂಜಾದ ಮೌಲ್ಯವು ೧.೫ ಕೋಟಿ ಎಂದು ಅಂದಾಜಿಲಾಗಿದೆ. ಈ ಬಗ್ಗೆ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.


ವಿದೇಶಿ ಮಹಿಳೆಯರು ವಶಕ್ಕೆ:


ವೀಸಾ ಅವಧಿ ಮೀರಿ ಅನಧಿಕೃತ ವಾಸವಾಗಿದ್ದ ವಿದೇಶಿ ಪ್ರಜೆಗಳ ವಿರುದ್ಧ ಇದೇ ತಂಡವು ಮೈಕೋಲೇಔಟ್ ನಲ್ಲಿ ಕಾರ್ಯಾಚರಣೆ ಕೈಗೊಂಡು ಇಬ್ಬರು ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದು, ಎಫ್ ಆರ್ ಆರ್ ಓ ಆದೇಶದಂತೆ ಫಾರಿನರ್ಸ್ ಡಿಟೆನ್ಷನ್ ಸೆಂಟರ್ ಗೆ ಬಿಡಲಾಗಿದೆ.


ಉಗಾಂಡದ ರಶೀದ ಹಾಗೂ ಜಾಮ್ ಕಾಲಿಸ್ಕೀ ಮಹಿಳೆಯರು ವೀಸಾ ಅವಧಿ ಮೀರಿದ್ದರೂ ಸ್ವದೇಶಕ್ಕೆ ಮರಳದೇ ಅನಧಿಕೃತ ವಾಸವಾಗಿದ್ದರು ಎಂದು ಕಮೀಷನರ್ ತಿಳಿಸಿದರು.


ಸಿಸಿಬಿಯ ಅಪರಾಧ-೨ ಡಿಸಿಪಿ ಶ್ರೀ.ರಾಜಾ ಇಮಾಮ್ ಖಾಸಿಂ ನೇತೃತ್ವದ ಎಸಿಪಿಗಳಾದ ಹೆಚ್.ಕೆ.ಮಹಾನಂದ್ ಇನ್ಸ್‌ಪೆಕ್ಟರ್ ಗಳಾದ ಮಂಜಪ್ಪ.ಸಿಎ,ರಕ್ಷಿತ್.ಎಕೆ,ವಿ.ಡಿ.ಶಿವರಾಜು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಈ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದರು.