
ಕಲಬುರಗಿ,ಸೆ.27-ನಗರದ ಹೀರಾಪುರ ಮತ್ತು ಹಾಗರಗಾ-ವೆಂಕಟಬೇನೂರ ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಹಾಗರಗಾ ರಸ್ತೆಯ ಫೈಜಲ್ ರೆಹಮಾನ್ ತಂದೆ ಮೊಹಮ್ಮದ್ ಸುಲ್ತಾನ್ (15) ಟ್ಯೂಷನ್‍ಗೆ ಬೈಕ್ ಮೇಲೆ ಹೀರಾಪುರ ಕಡೆಗೆ ಹೋಗುತ್ತಿದ್ದಾಗ ತಲೆಯ ಮೇಲಿನ ಟೋಪಿ ಕೆಳಗೆ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ಹೋದಾಗ ರಿಂಗ್ ರೋಡ್ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಫೈಜಲ್ ರೆಹಮಾನ್‍ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ವೆಂಕಟಬೇನೂರ ಗ್ರಾಮದ ಅನ್ಸರಸಾಬ್ ಅಲಿಯಾಸ್ ಅನ್ಸರ್ ಅಲಿ ಎಂಬುವವರು ಮರತೂರ ಗ್ರಾಮದಲ್ಲಿರುವ ಜಮೀನಿಗೆ ಹೋಗಿ ಮರಳಿ ಸ್ವಗ್ರಾಮಕ್ಕೆ ಬರಲು ಹಾಗರಗಾ ಕ್ರಾಸ್ ಹತ್ತಿರ ಟಂಟಂನಲ್ಲಿ ಕುಳಿತಿದ್ದಾರೆ. ಟಂಟಂ ವೆಂಕಟಬೇನೂರ ಕಡೆಗೆ ಹೋಗುತ್ತಿದ್ದಾಗ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.