Home ಕ್ರೈಂ ಸುದ್ದಿಗಳು ಡ್ರಾಪ್ ನೆಪದಲ್ಲಿ ಸುಲಿಗೆ ಇಬ್ಬರ ಸೆರೆ

ಡ್ರಾಪ್ ನೆಪದಲ್ಲಿ ಸುಲಿಗೆ ಇಬ್ಬರ ಸೆರೆ

ಬೆಂಗಳೂರು,ಏ.೩-ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ಹತ್ತಿಕೊಂಡು ಚಾಕು ಮತ್ತು ಹೆಲ್ಮೆಟ್‌ನಿಂದ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸಮಾರನಹಳ್ಳಿಯ ಹೆಚ್.ಎಸ್.ಸಂದೀಪ್ ಅಲಿಯಾಸ್ ಸ್ಯಾಂಡಿ (೨೬)ಹಾಗೂ ಶಾಮ್(೨೩)ಬಂಧಿತ ಆರೋಪಿಗಳಾಗಿದ್ದು,ಇಬ್ಬರಿಂದ ೨.೨೦ ಲಕ್ಷ ಮೌಲ್ಯದ ಬೈಕ್, ಮೊಬೈಲ್, ಪರ್ಸ್ ಹಾಗೂ ಕೃತ್ಯಕ್ಕೆ ಬಳಸಿದ ಚಾಕು, ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಮಿಥುನ್ ಕುಮಾರ್ ಜಿ.ಕೆ ತಿಳಿಸಿದ್ದಾರೆ.


ಚಿಕ್ಕಜಾಲ ಠಾಣಾ ವ್ಯಾಪ್ತಿಯ ನೆಲ್ಲುಕುಂಟೆಯಲ್ಲಿರುವ ಕಲ್ಯಾಣ ಮಂಟಪವೊಂದರ ಮ್ಯಾನೇಜರ್ ಕಳೆದ ಮಾ.೨೫ ರಂದು ಮುಂಜಾನೆ ೨.೩೦ರ ವೇಳೆ ಊಟ ತರಲು ಹುಣಸಮಾರನಹಳ್ಳಿಯ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವಾಗ ಆರೋಪಿಗಳು ಡ್ರಾಪ್ ಕೇಳಿ ಹತ್ತಿಕೊಂಡಿದ್ದು, ಹೊಸಹಳ್ಳಿ ರಸ್ತೆಯ ಡಿ-ಮಾರ್ಟ್‌ನ ಬಳಿ ಬಂದಾಗ ಬೈಕ್ ನಿಲ್ಲಿಸುವಂತೆ ತಿಳಿಸಿ ನಿಂದಿಸಿ ಚಾಕು ಹಾಗೂ ಹೆಲ್ಮೆಟ್‌ನಿಂದ ಹಲ್ಲೆ ಮಾಡಿ, ದ್ವಿ-ಚಕ್ರ ವಾಹನ, ಮೊಬೈಲ್ ಹಾಗೂ ಪರ್ಸ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು.


ಈ ಸಂಬಂಧ ನೀಡಿದ ದೂರು ಆಧರಿಸಿ ದಾಖಲಿಸಿದ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡು ಖಚಿತ ಮಾಹಿತಿ ಕಲೆಹಾಕಿ ಮರು ದಿನ ಹುಣಸಮಾರನಹಳ್ಳಿ ಬಳಿ ಕಾರ್ಯಾಚರಣೆ ಕೈಗೊಂಡ ಚಿಕ್ಕಜಾಲಾ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್.ಎನ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೃತ್ಯಕ್ಕೆ ಬಳಸಿದ ದ್ವಿ-ಚಕ್ರ ವಾಹನ, ಚಾಕು, ಹೆಲ್ಮೆಟ್, ಪರ್ಸ್,ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.