
ಮುಂಬೈ,ಫೆ.೨೪- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಸುಂಕ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಷೇರುಪೇಟೆ ತಲ್ಲಣವಾಗಿದೆ. ಇದರಿಂದ ಷೇರುದಾರರಲ್ಲಿ ಆತಂಕ ಮನೆ ಮಾಡಿದೆ.
ದಿನದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ ೧ ರಷ್ಟು ಕುಸಿತ ಕಂಡವು. ಎಐ ಬೆಳವಣಿಗೆ ಆತಂಕಗಳ ನಡುವೆ ಐಟಿ ಷೇರುಗಳಲ್ಲಿ ತೀವ್ರ ಮಾರಾಟ ಕುಸಿತಕ್ಕೆ ಕಾರಣವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸುಂಕದ ಹೇಳಿಕೆಗಳ ನಂತರ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ವ್ಯಾಪಾರದ ಬಗ್ಗೆ ಮತ್ತೆ ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿವೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
೩೦ ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ೮೧೩.೧೩ ಅಂಶಗಳಷ್ಟು, ಅಂದರೆ ಶೇ ೦.೯೭ ರಷ್ಟು ಕುಸಿದು ೮೨,೪೮೧.೫೩ರಲ್ಲಿ ವಹಿವಾಟು ಆರಂಭಿಸಿತ್ತು. ೫೦-ಷೇರುಗಳ ಎನ್‌ಎಸ್‌ಇ ನಿಫ್ಟಿ ೨೩೦.೧೫ ಅಂಶ ಅಥವಾ ಶೇ ೦.೮೯ ರಷ್ಟು ಕುಸಿದು ೨೫,೪೮೨.೮೫ರಲ್ಲಿ ವಹಿವಾಟು ಆರಂಭಿಸಿತ್ತು.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಎಟರ್ನಲ್ ಶೇ ೩.೮೨ರಷ್ಟು ಕುಸಿದಿದ್ದು, ನಂತರದ ಸ್ಥಾನದಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ವೆನ್ಸಿ ಸರ್ವೀಸಸ್, ಭಾರ್ತಿ ಏರ್‍ಟೆಲ್, ಬಜಾಜ್ ಫೈನಾನ್ಸ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಟ್ರೆಂಟ್, ಅದಾನಿ ಪೊರ್ಟ್ಸ್, ಐಟಿಸಿ ಮತ್ತು ಟೈಟಾನ್ ಷೇರುಗಳು ಇವೆ.
ಬ್ಯಾಂಕ್, ಪವರ್‍ಗ್ರಿಡ್, ಏಷ್ಯನ್ ಪೇಂಟ್ಸ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಮಾಡಲಿರುವ ಭಾಷಣದ ಬಗ್ಗೆ ಜಾಗತಿಕವಾಗಿ ಹೂಡಿಕೆದಾರರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಐರೋಪ್ಯ ಒಕ್ಕೂಟ, ಬ್ರಿಟನ್‌ನಂತಹ ಜಾಗತಿಕ ಮಿತ್ರರಾಷ್ಟ್ರಗಳು ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದಗಳ ಮರುಪರಾಮರ್ಶೆಗೆ ಮುಂದಾಗಿವೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಭಾರಿ ಸುಂಕ ಏರಿಕೆಯ ಬೆದರಿಕೆ ಹಾಕಿದ್ದಾರೆ. ಇದೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ತಜ್ಞರು. ಭಾರತವೂ ಸಹ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿತ್ತು.
ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಶಾಂಫೈನ ಎಸ್‌ಎಸ್‌ಇ ಕಾಂಪೊಸಿಟ್ ಇಂಡೆಕ್ಸ್ ಮತ್ತು ಜಪಾನ್‌ನ ನಿಕ್ಕಿ ೨೨೫ ಬೆಂಚ್‌ಮಾರ್ಕ್‌ಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಇಳಿಕೆ ಕಂಡಿದೆ. ವಹಿವಾಟಿನಲ್ಲಿ ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಸುಮಾರು ಶೇ ೨ರಷ್ಟು ಕುಸಿತದೊಂದಿಗೆ ಕೊನೆಗೊಂಡಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ೩,೪೮೩.೭೦ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು೧, ೨೯೨.೨೪ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ದತ್ತಾಂಶಗಳು ತಿಳಿಸಿವೆ.





























