
ವಾಷಿಂಗ್ಟನ್, ಆ.೨೬- ಈ ವರ್ಷದ ಕೊನೆಯಲ್ಲಿ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಯಮ ಪಾಲಿಸದಿದ್ದರೆ ಶೇಕಡಾ ೨೦೦ ರಷ್ಟು ತೆರಿಗೆ ವಿಧಿಸಬೇಕಾಗುತ್ತದೆ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.
ಆಟೋಮೋಟಿವ್‌ನಿಂದ ರಕ್ಷಣೆಯವರೆಗೆ ಕೈಗಾರಿಕೆಗಳಲ್ಲಿ ಬಳಸುವ ಅಪರೂಪದ ಭೂಮಿಯ ಅಂಶಗಳ ಪ್ರಮುಖ ಉತ್ಪನ್ನಗಳು ಮತ್ತು ಆಯಸ್ಕಾಂತಗಳ ಬಗ್ಗೆ ಚೀನಾ ನಿಯಮ ಪಾಲನೆ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಸುಂಕ ವಿಧಿಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಚೀನಾ ನಮಗೆ ಆಯಸ್ಕಾಂತಗಳನ್ನು ನೀಡದಿದ್ದರೆ, ಅವರ ಮೇಲೆ ಶೇಕಡಾ ೨೦೦ ರಷ್ಟು ಸುಂಕ ವಿಧಿಸಬೇಕಾಗುತ್ತದೆ. ಇದನ್ನು ಅರಿತು ಚೀನಾ ನಡೆದುಕೊಂಡರೆ ಎರಡೂ ದೇಶಗಳಿಗೆ ಒಳಿತಾಗಲಿದೆ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಈ ಘೋಷಣೆ ಬಂದಿದೆ. ಅಮೇರಿಕಾ- ಚೀನಾದ ಸಂಬಂಧಗಳ ಸ್ಥಿತಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಇತ್ತೀಚಿನ ಮಾತುಕತೆ ಉಲ್ಲೇಖಿಸಿ ಈ ಎಚ್ಚರಿಕೆ ನೀಡಿದ್ದಾರೆ.
ಬಹುಶಃ ಈ ವರ್ಷದಲ್ಲಿ ಅಥವಾ ಸ್ವಲ್ಪ ಸಮಯದ ನಂತರ, ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉತ್ತಮ ಸಂಬಂಧ ಹೊಂದಬೇಕು ಎನ್ನುವ ವಿಶ್ವಾಸ ಮತ್ತು ನಂಬಿಕೆ ಚೀನಾಗೆ ಇದ್ದರೆ ಸರಕು ಮತ್ತು ಸೇವೆಯ ವಿಷಯದಲ್ಲಿ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಹೆಚ್ಚಿನ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸೂಚಿಸಿದ್ದಾರೆ.
ಚೀನಾದೊಂದಿಗೆ ಸಂಬಂಧಗಳ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ , ಅಮೆರಿಕಾ ಚೀನಾ ನಡುವೆ ಸಂಬಂಧ ಸುಧಾರಣೆ ಆಗುವ ವಿಶ್ವಾಸವಿದೆ ಆದರೆ ಎಲ್ಲವೂ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಈ ವರ್ಷದ ಆರಂಭದಲ್ಲಿ, ಎರಡೂ ಕಡೆಯವರು ಪರಸ್ಪರ ಸರಕುಗಳ ಮೇಲೆ ದಂಡನಾತ್ಮಕ ಸುಂಕ ವಿಧಿಸಿದ್ದರಿಂದ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಬಂಧಗಳು ಹಳಸಿದೆ. ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಿತು. ಒಂದು ಹಂತದಲ್ಲಿ ಸಂಬಂಧ ಸುಧಾರಣೆ ಮಾಡಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದಿದೆ.