
ವಾಷಿಂಗ್ಟನ್.ಅ.೨೧- ಅಮೆರಿಕಾದೊಂದಿಗೆ ನ್ಯಾಯಯುತ ಒಪ್ಪಂದ ಮಾಡಿಕೊಳ್ಳಲು ಚೀನಾ ವಿಫಲವಾದರೆ ಚೀನಾದ ಉತ್ಪನ್ನಗಳ ಮೇಲೆ ನವಂಬರ್ ೧ ರಿಂದ ಅನ್ವಯವಾಗುವಂತೆ ಶೇಕಡಾ ೧೫೫ ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೇರಿಕಾದ ಮಾತು ಕೇಳದ ದೇಶಗಳನ್ನು ಹೆದರಿಸಲು ಸುಂಕಾಸ್ತ್ರ ಪ್ರಯೋಗಿಸುತ್ತಿರುವ ಡೊನಾಲ್ಡ್ ಟ್ರಂಪ್, ಇದೀಗ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ದೇಶವಾಗಿರುವ ಚೀನಾದ ಮೇಲೆಯೂ ಹೆಚ್ಚಿನ ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಈ ತಿಂಗಳ ಕೊನೆಯಲ್ಲಿ ಕೊನೆಯಲ್ಲಿ ಭೇಟಿ ಮಾಡಲಿದ್ದು ಈ ವೇಳೆ ೨೧ ಆರ್ಥಿಕ ವಿಷಯಗಳನ್ನು ಒಟ್ಟುಗೂಡಿಸುವ ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆ ಕುರಿತು ಚರ್ಚೆ ನಡೆಯಲಿದೆ, ಇದೇ ವೇಳೆ ಹಲವು ಒಪ್ಪಂದಗಳ ಬಗ್ಗೆಯೂ ಮಾತುಕತೆ ನಡೆಯಲಿದೆ, ಚೀನಾ ಅಧ್ಯಕ್ಷರು ಒಪ್ಪಂದಕ್ಕೆ ಸಮ್ಮತಿ ನೀಡಿದಿದ್ದರೆ ಹೆಚ್ಚಿನ ಸುಂಕ ವಿಧಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅಮೆರಿಕಾದೊಂದಿಗೆ ಚೀನಾ ನ್ಯಾಯಯುತ ಒಪ್ಪಂದ ತಲುಪಲು ವಿಫಲವಾದರೆ ಶೇ. ೧೫೫ರಷ್ಟು ಸುಂಕ ವಿಧಿಸುವುದಾಗಿ ಚೀನಾಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಶ್ವೇತಭವನದಲ್ಲಿ ನಿರ್ಣಾಯಕ ಖನಿಜ ಒಪ್ಪಂದಕ್ಕೆ ಚೀನಾ ಸಹಿ ಹಾಕಬೇಕು ಎನ್ನುವ ಸಂದೇಶವನ್ನೂ ಇದೇ ವೇಳೆ ಚೀನಾಕ್ಕೆ ರವಾನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, “ಚೀನಾ ನಮ್ಮನ್ನು ಗೌರವಿಸುತ್ತಿದೆ ಎಂದು ಭಾವಿಸುತ್ತೇನೆ. ಅವರು ಸುಂಕದ ರೂಪದಲ್ಲಿ ನಮಗೆ ಅಪಾರ ಪ್ರಮಾಣದ ಹಣ ಪಾವತಿಸುತ್ತಿದ್ದಾರೆ. ಈಗಾಗಲೇ ಶೇಕಡ ೫೫ ರಷ್ಟು ಸುಂಕ ಪಾವತಿ ಮಾಡುತ್ತಿದ್ದಾರೆ. ಅಮೇರಿಕಾದ ಜೊತೆ ಒಪ್ಪಂದಕ್ಕೆ ಸಮ್ಮತಿ ನೀಡದಿದ್ದರೆ ನವಂಬರ್ ೧ ರಿಂದ ಅನ್ವಯವಾಗುವಂತೆ ಶೇಕಡಾ ೧೫೫ ರಷ್ಟು ಸುಂಕ ವಿಧಿಸಲಾಗುವುದು ಎಂದಿದ್ದಾರೆ.
“ಚೀನಾದ ಅಧ್ಯಕ್ಷ ಕ್ಸಿ ಅವರೊಂದಿಗೆ ನ್ಯಾಯಯುತ ವ್ಯಾಪಾರ ಒಪ್ಪಂದ ರೂಪಿಸುತ್ತೇವೆ ಎನ್ನುವ ನಿರೀಕ್ಷೆಯಲ್ಲಿದ್ದೇನೆ, ಅವರು ಒಪ್ಪಂದಕ್ಕೆ ಬರದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.
































