
ವಾಷಿಂಗ್ಟನ್,ಮಾ,೩೦- ಅಮೆರಿಕದ ಶಾಂತಿ ಒಪ್ಪಂದ ಭಾಗವಾಗಿ ಮುಂದಿನ ಆದೇಶದ ಹೊರೆಗೆ ೨೦ ಹಡಗುಗಳ ಸಂಚಾರಕ್ಕೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ ೬ ರವರೆಗೆ ಸ್ವಯಂ ವಿಧಿಸಿದ ಗಡುವನ್ನು ವಿಸ್ತರಿಸಿದ್ದು ಅದರ ಭಾಗವಾಗಿ ನಡೆಯುತ್ತಿರುವ ಶಾಂತಿ ಒಪ್ಪಂದದ ಭಾಗವಾಗಿ ೨೦ ಹಡಗುಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ಆಡಳಿತದಲ್ಲಿ ಭಾರೀ ಬದಲಾವಣೆ ಆಗಿದೆ.ಇದರ ಭಾಗವಾಗಿ ಹಾರ್ಮುಜ್ ಜಲಸಂಧಿ ಹುಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಇರಾನ್‌ನ ಪ್ರಸ್ತುತ ಸರ್ವೋಚ್ಛ ನಾಯಕ ಆಯಾತೊಲ್ಲ ಆಲಿ ಖಮೇನಿ ಮತ್ತು ಅವರ ಪುತ್ರ ಪುತ್ರ ಮೊಜ್ತಾಬಾ ಖಮೇನಿ ಸೇರಿದಂತೆ ಇರಾನ್ ಸರ್ಕಾರದ ಪ್ರಮುಖ ಸಚಿವರು ಮತ್ತು ನಾಯಕರನ್ನು ಹತ್ಯೆ ಮಾಡಲಾಗಿದೆ. ಇದರಿಂದ ಇರಾನ್ ನಾಯಕತ್ವದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಇಸ್ಲಾಮಿಕ್ ಗಣರಾಜ್ಯದ ಅಧಿಕಾರ ರಚನೆಯೊಳಗಿನ ಬದಲಾವಣೆ ಆಗಿದ್ದು ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಭಾವಿಸುತ್ತೇನೆ. ಆದರೆ ಇರಾನ್ ಮುಕ್ತ ಮನಸ್ಸು ಹೊಂದಿಲ್ಲದ ಹಿನ್ನೆಲೆಯಲ್ಲಿ ಸಂಘರ್ಷ ನಿಲ್ಲುವುದಕ್ಕಿಂತ ಹೆಚ್ಚಾಗಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವಂತಾಗಿದೆ ಎಂದಿದ್ದಾರೆ.
ಶಾಂತಿ ಒಪ್ಪಂದ ಚರ್ಚೆಯಲ್ಲಿ : ಟ್ರಂಪ್
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮುಂದುವರೆದಂತೆ, ಯುದ್ಧ ಕೊನೆಗೊಳಿಸಲು ಪಾಕಿಸ್ತಾನದ ಮೂಲಕ ಅಮೆರಿಕ ಮಂಡಿಸಿದ ೧೫ ಅಂಶಗಳ ಪಟ್ಟಿಯ “ಹೆಚ್ಚಿನ” ಬೇಡಿಕೆಗಳಿಗೆ ಇರಾನ್ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಇರಾನ್ ಜೊತೆ ’ನೇರವಾಗಿ ಮತ್ತು ಪರೋಕ್ಷವಾಗಿ’ ಮಾತುಕತೆ ನಡೆಸುತ್ತಿದೆ. ಈ ಸಂಬಂಧ ಹಲವು ಸಭೆಗಳನ್ನು ನಡೆಸುತ್ತಿದ್ದೇವೆ. ಅದರ ಭಾಗವಾಗಿ ೧೫ ಅಂಶಗಳ ಶಾಂತಿ ಒಪ್ಪಂದ ಕುರಿತು ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂದು ಬೆಳಿಗ್ಗೆಯಿಂದ ಮುಂದಿನ ಕೆಲವು ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಿಸುವ ೨೦ ಹಡಗುಗಳಿಗೆ ಇರಾನ್ ಅನುಮತಿ ನೀಡಿದೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ.
೩೦೦೦ಕ್ಕೂ ಅಧಿಕ ಮಂದಿ ಸಾವು
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭವಾದ ನಂತರ ಈವರೆಗೆ ಇರಾನ್ ಸೇರಿದಂತೆ ಸಂಘರ್ಷ ಪೀಡಿತ ಭಾಗಗಳಲ್ಲಿ ೩,೦೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ.
ಯುದ್ಧದ ಪರಿಣಾಮ ಜಾಗತಿಕ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರ ಪೂರೈಕೆಗೆ ಅಡ್ಡಿಯಾಗಿದೆ. ಪ್ರಮುಖ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ಹಿಡಿತ ಸಾಧಿಸಿದ ಹಿನ್ನೆಲೆಯಲ್ಲಿ ಕಚ್ಚಾತೈಲ ಮಾರುಕಟ್ಟೆಗಳು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರಿದೆ.
ಕೊಲ್ಲಿ ದೇಶಗಳಲ್ಲಿ ಕ್ಷಿಪಣಿ ಸದ್ದು
ಇರಾನ್ ಹೊಸ ದಾಳಿಗಳನ್ನು ನಡೆಸಿದ ನಂತರ ಕೊಲ್ಲಿಯಲ್ಲಿ ಕ್ಷಿಪಣಿ ಎಚ್ಚರಿಕೆಗಳು ಮೊಳಗಿವೆ. ಇದರಿಂದ ಇಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್ ಮತ್ತು ಬಹ್ರೇನ್ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯಗೊಳಿಸಲಾಗಿದೆ ಎಂದು ಹೇಳಲಾಗಿದೆ.
ದಾಳಿಗಳ ಮಧ್ಯೆ, ಕುವೈತ್‌ನ ವಿದ್ಯುತ್ ಸ್ಥಾವರದ ಮೇಲೆ ಇರಾನಿನ ದಾಳಿಯು ಒಬ್ಬ ಭಾರತೀಯ ಕಾರ್ಮಿಕನನ್ನು ಸಾವನ್ನಪ್ಪಿದ್ದಾನೆ. ಜೊತೆಗೆ ಸ್ಥಳದಲ್ಲಿ ಒಂದು ಕಟ್ಟಡಕ್ಕೆ ಹಾನಿ ಮಾಡಿತು ಎಂದು ಗಲ್ಫ್ ದೇಶದ ವಿದ್ಯುತ್ ಸಚಿವಾಲಯ ತಿಳಿಸಿದೆ.
“ಕುವೈತ್ ರಾಜ್ಯದ ವಿರುದ್ಧ ಇರಾನಿನ ಆಕ್ರಮಣದ ಭಾಗವಾಗಿ ವಿದ್ಯುತ್ ಮತ್ತು ನೀರು ನಿರ್ಲವಣೀಕರಣ ಘಟಕದಲ್ಲಿನ ಸೇವಾ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು, ಇದರ ಪರಿಣಾಮವಾಗಿ ಭಾರತೀಯ ಕಾರ್ಮಿಕನೊಬ್ಬ ಸಾವನ್ನಪ್ಪಿದನು ಮತ್ತು ಕಟ್ಟಡಕ್ಕೆ ಗಮನಾರ್ಹ ವಸ್ತು ಹಾನಿಯಾಗಿದೆ” ಎಂದು ಸಚಿವಾಲಯದ ವಕ್ತಾರ ಫಾತಿಮಾ ಅಬ್ಬಾಸ್ ಜವಾಹರ್ ಹಯಾತ್ ಹೇಳಿದ್ದಾರೆ.































