ತ್ರಿಕೋನ ತಾಕಲಾಟ: ನಾಳೆ ಹೈಕೋರ್ಟ್ ಮತ್ತೆ ವಿಚಾರಣೆ ಆರ್.ಎಸ್.ಎಸ್ ಮನವಿ ಪತ್ರದ ಬೆನ್ನಲ್ಲೇ ಭೀಮ್ ಆರ್ಮಿ, ಪ್ಯಾಂಥರ್ ಅರ್ಜಿ

ಕಲಬುರಗಿ, ಅ.23: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನ.2ರಂದು ಪಥ ಸಂಚಲನ ಕೈಗೊಳ್ಳುವುದಾಗಿ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಆರ್.ಎಸ್.ಎಸ್. ಮುಖಂಡರು ಮಂಗಳವಾರ ಮನವಿ ಪತ್ರ ಸಲ್ಲಿಸಿದ ಬೆನ್ನಲ್ಲೇ ಭೀಮ್ ಆರ್ಮಿ ಮತ್ತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಮುಖಂಡರು ಸಹ ಅದೇ ದಿನ ತಮಗೂ ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಪತ್ರ ಸಲ್ಲಿಸಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಆರ್.ಎಸ್.ಎಸ್ ಬೆನ್ನಲ್ಲೇ ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ ಮನವಿ ಸಲ್ಲಿಸಿದ ಕಾರಣಕ್ಕಾಗಿ ಇದೀಗ ಪಥ ಸಂಚಲನ ಕುರಿತಂತೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಚಿತ್ತಾಪುರ ಪಟ್ಟಣದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಿಕೊಳ್ಳಲು ಪೆÇಲೀಸ್ ಇಲಾಖೆ ಮುಂದಾಗಿದೆ. ಈ ಮಧ್ಯೆ, ಪಥ ಸಂಚಲನ ನಡೆಸುವ ಯಾವುದೇ ಸಂಘಟನೆಗೆ ಪ್ರತ್ಯೇಕ ದಿನಾಂಕಗಳನ್ನು ನೀಡುವಂತೆ ಈಗಾಗಲೇ ಕಲಬುರಗಿ ಹೈಕೋರ್ಟ್ ಪೀಠ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ನಿರ್ದೇಶನ ನೀಡಿದ್ದರೂ ಒಂದೇ ದಿನ ಪಥ ಸಂಚಲನಕ್ಕೆ ಅವಕಾಶ ನೀಡುವಂತೆ ಎಲ್ಲ ಮೂರು ಸಂಘಟನೆಗಳ ಮುಖಂಡರು ಮನವಿ ಮಾಡಿರುವುದರಿಂದ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ನಿಗಾ ನೆಟ್ಟಿದೆ.
ಈ ಮಧ್ಯೆ, ಒಂದೇ ದಿನ ಮೂರು ಮನವಿ ಪತ್ರಗಳು ಸಲ್ಲಿಕೆ ಆಗಿರುವ ಕಾರಣಕ್ಕಾಗಿ ಅನುಮತಿ ನೀಡುವ ಹಾಗೂ ನೀಡುವುದರಿಂದ ಎದುರಾಗಬಹುದಾದ ವಿದ್ಯಮಾನಗಳ ಕುರಿತು ಅಧ್ಯಯನ ಕೈಗೊಂಡು ವರದಿ ನೀಡುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹಾಗೂ ಸೇಡಂ ಸಹಾಯಕ ಆಯುಕ್ತರು ಹಾಗೂ ಚಿತ್ತಾಪುರ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಯಾರ್ಯಾರ ಮನವಿಯಲ್ಲಿ ಏನಿದೆ?
ಆರ್.ಎಸ್.ಎಸ್. ಮುಖಂಡರು ಕಲಬುರಗಿ ಹೈಕೋರ್ಟ್ ಪೀಠದ ನಿರ್ದೇಶನದಂತೆ ಅ.19ರಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದರಾದರೂ ಆ ದಿನ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಲಭ್ಯವಾಗದ ಕಾರಣ ಮನವಿ ಪತ್ರವನ್ನು ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಸಲ್ಲಿಸಿದ್ದರು. ಈ ಮಧ್ಯೆ, ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ತೆರಳಿದ ಆರ್.ಎಸ್.ಎಸ್. ಮುಖಂಡರು ಮನವಿ ಪತ್ರವನ್ನು ಮತ್ತೊಮ್ಮೆ ಅಧಿಕೃತವಾಗಿ ಸಲ್ಲಿಸಿದರು.
ಒಟ್ಟು 600 ಸ್ವಯಂ ಸೇವಕರು ನ.2ರಂದು ಚಿತ್ತಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಎಲ್ಲರ ಕೈಯಲ್ಲೂ ಬಿದಿರಿನ ಲಾಠಿ ಇರಲಿವೆ ಎಂದು ಸ್ಪಷ್ಟವಾಗಿ ಆರ್.ಎಸ್.ಎಸ್ ಮುಖಂಡರು ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ, ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ರಾಜ್ಯ ಯುವ ಘಟಕದ ಮುಖಂಡರು ಸಲ್ಲಿಸಿರುವ ಮನವಿ ಪತ್ರದಲ್ಲಿಯೂ ಸಹ ಬಿದಿರಿನ ಕೋಲು, ಬೌದ್ಧ ಧರ್ಮದ ಪಂಚಶೀಲ ಧ್ವಜ ಹಾಗೂ ಸಂವಿಧಾನ ಪೀಠಿಕೆ ಹಿಡಿದು ಪಥ ಸಂಚಲನ ನಡೆಸುವುದಾಗಿ ಸ್ಪಷ್ಟವಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ, ತನ್ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೂಡ ಕೈಯಲ್ಲಿ ಬಿದಿರಿನ ಕೋಲು ಹಾಗೂ ಸಂವಿಧಾನದ ಪೀಠಿಕೆ ಹಿಡಿದು ಪಥ ಸಂಚಲನ ಕೈಗೊಳ್ಳುವುದಾಗಿ ದಲಿತ ಪ್ಯಾಂಥರ್ ಚಿತ್ತಾಪುರ ಘಟಕದ ಮುಖಂಡರು ಸಲ್ಲಿಸಿರುವ ಮನವಿ ಪತ್ರದಲ್ಲಿ ಮನದಟ್ಟು ಮಾಡಿಸಿದ್ದಾರೆ. ಎಲ್ಲರ ಮನವಿ ಪತ್ರಗಳನ್ನು ಸ್ವೀಕರಿಸಿರುವ ಜಿಲ್ಲಾಧಿಕಾರಿಗಳು ಅನುಮತಿ ನೀಡುವ ನಿರ್ಧಾರವನ್ನು ಇನ್ನೂ ಗೌಪ್ಯವಾಗಿರಿಸಿದ್ದಾರೆ.


ನಾಳೆ ಮತ್ತೆ ಹೈಕೋರ್ಟ್ ವಿಚಾರಣೆ
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಅ.18ರಂದು ಆರ್.ಎಸ್.ಎಸ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ ಪೀಠ ಇದೇ ಅರ್ಜಿಯ ಮುಂದುವರೆದ ವಿಚಾರಣೆಯನ್ನು ಶುಕ್ರವಾರ (ಅ.24) ಕೈಗೆತ್ತಿಕೊಳ್ಳಲಿದೆ.
ಆರ್.ಎಸ್.ಎಸ್ ಪರವಾಗಿ ಅಶೋಕ ಪಾಟೀಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ರಾಜ್ಯ ಸರಕಾರವೂ ತನ್ನ ವರದಿಯನ್ನು ನ್ಯಾಯಪೀಠದ ಎದುರು ಸಲ್ಲಿಸಲಿದೆ. ಹೀಗಾಗಿ, ಅಕ್ಟೋಬರ್ 24ರಂದು ನಡೆಯಲಿರುವ ಹೈಕೋರ್ಟ್ ವಿಚಾರಣೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತಗೊಂಡಿದೆ.
ಇದೇವೇಳೆ, ನ.18ರಂದು ಆರ್.ಎಸ್.ಎಸ್. ಪಥ ಸಂಚಲನ ನಡೆಯಬಹುದು ಎಂಬ ಲೆಕ್ಕಾಚಾರದಿಂದ ಚಿತ್ತಾಪುರ ಪಟ್ಟಣದಲ್ಲಿ ಏರ್ಪಡಿಸಿದ್ದ ಪೆÇಲೀಸ್ ಬಂದೋಬಸ್ತ್ ಇನ್ನೂ ಮುಂದುವರೆದಿದ್ದು, ಬಿಗಿ ವಾತಾವರಣ ಹಾಗೆಯೇ ಮುಂದುವರೆದಿದೆ.