Home ಕ್ರೈಂ ಸುದ್ದಿಗಳು ನಗನೂರ ಸಮೀಪ ದಾರುಣ ಘಟನೆ: ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವಿಗೆ ತುತ್ತು

ನಗನೂರ ಸಮೀಪ ದಾರುಣ ಘಟನೆ: ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವಿಗೆ ತುತ್ತು

ಯಾದಗಿರಿ : ನಗನೂರ ಗ್ರಾಮದ ಸಮೀಪ ಭಾನುವಾರ ಸಂಭವಿಸಿದ ದಾರುಣ ಘಟನೆಯಲ್ಲಿ ನಾಲ್ವರು ಅಪ್ರಾಪ್ತ ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವುದು ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಗ್ರಾಮದಿಂದ ಸುಮಾರು 3–4 ಕಿಲೋಮೀಟರ್ ದೂರದಲ್ಲಿರುವ ಭೀಮಣ್ಣ ಗೌಡಗೇರಿ ಅವರ ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ಈ ದುರ್ಘಟನೆ ನಡೆದಿದೆ. ಈಜಾಡಲು ಹೋಗಿದ್ದ ವೇಳೆ ಆಳವಾದ ನೀರಿನಲ್ಲಿ ಮುಳುಗಿ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತರಾದ ಮಕ್ಕಳ ವಿವರ ಹೀಗಿದೆ:

  • ಬಸಮ್ಮ (ಹೆಣ್ಣುಮಗಳು), ತಂದೆ ಬಸವರಾಜ್ ಕಾಡಮಗೇರಿ
  • ಶರತ್ (06 ವರ್ಷ), ತಂದೆ ರಾಜಪ್ಪ ಕಾಡಮಗೇರಿ
  • ಹನುಮೇಶ್ (08 ವರ್ಷ), ತಂದೆ ರಾಜಪ್ಪ ಕಾಡಮಗೇರಿ
  • ಕಿರಣ್ (06 ವರ್ಷ), ತಂದೆ ಮಲ್ಲಿಕಾರ್ಜುನ ಅಂಬರಗೊಂಡ

ಘಟನೆಯ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಾದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಇಂತಹ ದುರಂತಗಳನ್ನು ತಪ್ಪಿಸಲು ಕೃಷಿ ಹೊಂಡಗಳ ಸುತ್ತ ಭದ್ರತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.