ಹಂಪಿ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಓರ್ವ ಕೊಲೆ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಕೊಪ್ಪಳ, ಫೆ.16: ಹಂಪಿ ಬಳಿ ಇಸ್ರೇಲ್ ಮಹಿಳೆ ಸೇರಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅಮೆರಿಕ ಪ್ರವಾಸಿಗನ ಕೊಲೆ ಪ್ರಕರಣದ ಅಪರಾಧಿಗಳಿಗೆ ನಗರದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.


ಪ್ರಕರಣಕ್ಕೆ ಸಂಬಂಧಿಸಿ ಗಂಗಾವತಿ ನ್ಯಾಯಾಲಯವು ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದೀಗ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.


ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ. ಘಟನೆ ನಡೆದ 9 ತಿಂಗಳಲ್ಲೇ ಗಂಗಾವತಿ ಕೋರ್ಟ್ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರು ತೀರ್ಪು ಪ್ರಕಟಿಸಿ, ಇಂತಹ ಕ್ರೂರ ಅಪರಾಧಗಳಿಗೆ ಸಮಾಜದಲ್ಲಿ ಬದುಕಲು ಯಾವುದೇ ಸ್ಥಳವಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.


ಮರಣ ದಂಡನೆ ವಿಧಿಸಿ ಆದೇಶಿದರು. ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್​ನಲ್ಲಿ ಹಾಜರಿದ್ದ ಆರೋಪಿಗಳು ಬಿಕ್ಕಳಿಸಿ ಅತ್ತರು.


ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿ ಐತಿಹಾಸಿಕ ಆದೇಶ ಮಾಡಿದ್ದಾರೆ. ಆದೇಶದ ಪ್ರತಿಯನ್ನು ಹೈಕೋರ್ಟ್​ಗೆ ಸಲ್ಲಿಸಲಾಗುವುದು. ಅಲ್ಲಿ ಪರಿಶೀಲನೆ ಮಾಡಿದ ಬಳಿಕ ಆದೇಶ ಜಾರಿಯಾಗುತ್ತದೆ ಎಂದು ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ಹೇಳಿದರು.


ಆರು ತಿಂಗಳಲ್ಲಿ ಆದೇಶ:
ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಒಬ್ಬ ಪ್ರವಾಸಿಗನ ಕೊಲೆ ಮಾಡಿದ ಪ್ರಕರಣವು, ನ್ಯಾಯಾಲಯಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ಮಾಡಿ ಆದೇಶ ಜಾರಿ ಮಾಡಿರುವುದು ಗಂಗಾವತಿಯ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲು ಎಂದು ವಕೀಲರು ಹೇಳಿದ್ದಾರೆ.


ಕಳೆದ 2025ರ ಮಾರ್ಚ್ 6ರಂದು ಪ್ರಕರಣ ನಡೆದಿತ್ತು. ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸ್ ಇಲಾಖೆಗೆ 90 ದಿನಗಳ ಕಾಲವಕಾಶವಿತ್ತು. ಕೆಳ ಹಂತದ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲಿಸಿದ ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಪ್ರಕರಣ ವಿಚಾರಣೆಗೆ ಬಂದ ಕೇವಲ ಆರು ತಿಂಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.


ಐತಿಹಾಸಿಕ ತೀರ್ಪು ಪ್ರಕಟ:

ಕೊಪ್ಪಳ ಜಿಲ್ಲೆ ರಚನೆಯಾಗಿ ಎರಡೂವರೆ ದಶಕಗಳಲ್ಲಿ ಇದುವರೆಗೂ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆ ಪ್ರಕಟವಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ, ಒಬ್ಬ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ವಿಧಿಸುವ ಮೂಲಕ ಇಲ್ಲಿನ ಜಿಲ್ಲಾ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.