Home ಮುಖಪುಟ ಸುದ್ದಿ ಮಂತ್ರಿ ಸ್ಥಾನ ಕೇಳಲು ಇದು ಸಮಯವಲ್ಲ

ಮಂತ್ರಿ ಸ್ಥಾನ ಕೇಳಲು ಇದು ಸಮಯವಲ್ಲ

ಶಿಸ್ತು ಮೀರಿದರೆ ಕ್ರಮ

ಬೆಂಗಳೂರು, ಏ. ೧೩- ಕಾಂಗ್ರೆಸ್‌ನ ಹಿರಿಯ ಶಾಸಕರು ಮಂತ್ರಿ ಸ್ಥಾನಕ್ಕಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿರುವಾಗಲೇ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸ್ಥಾನ ಕೇಳುವ ಸಮಯ ಇದಲ್ಲ. ಪಕ್ಷದ ಶಿಸ್ತು ಮೀರಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ದೆಹಲಿಯಲ್ಲಿರುವ ಕೈ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.


ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ನಂತರ ಅವರ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನೊಳಗೆ ಎಲ್ಲರೂ ಮಾತನಾಡಬೇಕು. ನಾನು ಮಾಧ್ಯಮಗಳಲ್ಲಿ ಕೈ ಶಾಸಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಕೆಲವರು ಏನೆನೋ ಮಾತನಾಡಿದ್ದಾರೆ. ಮಾಧ್ಯಮ ನಿಮ್ಮ ಭವಿಷ್ಯ ಅಲ್ಲ, ಪಕ್ಷ ನಿಮ್ಮ ಭವಿಷ್ಯ., ಪಕ್ಷದಲ್ಲೇ ಎಲ್ಲರ ಭವಿಷ್ಯವಿದೆ ಎಂದರು.


ಸಂಪುಟ ಪುನಾರಚನೆ ಕೇಳುವ ಸಮಯ ಇದಲ್ಲ. ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡೋಣ. ಮಂತ್ರಿಗಳಾಗಬಾರದು ಎಂದೆನಿಲ್ಲಾ. ಈಗ ಮಂತ್ರಿ ಮಾಡು ಅನ್ನೋ ಟೈಂ ಅಲ್ಲ ಎಂದು ಡಿ.ಕೆ. ಶಿವಕುಮಾರ್, ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಹಿರಿಯ ಶಾಸಕರ ವಿರುದ್ಧ ಗರಂ ಆದರು.


ಪಕ್ಷದ ಶಿಸ್ತು ಮೀರಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.
ತಮಿಳುನಾಡಿನ ಚುನಾವಣೆಗೆ ನಾನು ಹೋಗಬೇಕಾಗಿದೆ. ಆ ಬಗ್ಗೆ ಮಾತನಾಡಲು ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ದೆಹಲಿಗೆ ಕೆಲ ಶಾಸಕರು ಹೋಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕೂಡಾ ಮಾತನಾಡಿದ್ದಾರೆ. ಯಾವುದೇ ಶಾಸಕರು ಪಕ್ಷದ ಶಿಸ್ತನ್ನು ಕಾಪಾಡಬೇಕು. ವರಿಷ್ಠರನ್ನು ಭೇಟಿ ಮಾಡುವುದು ತಪ್ಪಲ್ಲ. ಆದರೆ, ಅನಗತ್ಯ ಹೇಳಿಕೆಗಳನ್ನು ಕೊಟ್ಟರೆ ನಾನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದರು.


ಮಂತ್ರಿ ಮಾಡಿ ಎಂದು ಕೇಳಿ. ಆದರೆ ಶಿಸ್ತು ಮೀರಿ ಹೋಗಬೇಡಿ ಎಂದುಡಿ.ಕೆ. ಶಿವಕುಮಾರ್ ಕಿವಿ ಮಾತು ಹೇಳಿದರು.