ಮಂತ್ರಿ ಸ್ಥಾನಕ್ಕೆ ಬೇಡಿಕೆ ತಪ್ಪೇನಿಲ್ಲ: ಡಿಕೆಶಿ

ಬೆಂಗಳೂರು, ಫೆ. ೨೪- ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕರು ಮಂತ್ರಿ ಸ್ಥಾನದ ಬೇಡಿಕೆ ಇಟ್ಟಿರುವುದರಲ್ಲಿ ತಪ್ಪೇನು ಇಲ್ಲ. ಎಲ್ಲರಿಗೂ ಮಂತ್ರಿ ಆಗಬೇಕು ಎಂಬ ಆಸೆ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿ ಗೆದ್ದ ಶಾಸಕರು ಮಂತ್ರಿಗಿರಿಗೆ ಬೇಡಿಕೆಯಿಟ್ಟು ಬರೆದಿರುವ ಪತ್ರ ನನಗೆ ತಲುಪಿಲ್ಲ. ನಾನು ಪತ್ರಿಕೆಗಳಲ್ಲಿ ನೋಡಿದ್ದೇನೆ ಅಷ್ಟೆ ಎಂದರು.


ಹೊಸ ಶಾಸಕರ ಬೇಡಿಕೆ ತಪ್ಪೇನಲ್ಲ. ಹೊಸ ಪೀಳಿಗೆ ಬೆಳೆಯಬೇಕು. ನಾವೇ ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಆಗುತ್ತದೆ. ನಾನು ಮಂತ್ರಿಯಾಗಿ ೩೬ ವರ್ಷ ಆಯಿತು, ಹೊಸ ಜನರೇಷನ್ ಬರಬೇಕು. ಅವರು ಕೇಳಿರುವುದರಲ್ಲಿ ತಪ್ಪೇನಿಲ್ಲ. ಪಕ್ಷದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.


ಹೊಸ ಶಾಸಕರು ನಿಮ್ಮ ಮಂತ್ರಿ ಮಂಡಲ ಸೇರಲು ಅವಕಾಶ ಸಿಗುತ್ತಾ ಎಂಬ ಪ್ರಶ್ನೆಗೆ ನಾನು ಮಂತ್ರಿ ಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದಿದ್ದಾರೆ. ಅವರು ದೆಹಲಿಗೆ ಹೋಗುತ್ತಾರೆ, ಹಾಗಾಗಿ ಕೆಲವರು ಪತ್ರ ಬರೆಯುತ್ತಾರೆ, ಇನ್ನು ಕೆಲವರು ಹೊರಗಡೆಯಿಂದ ಪ್ರಭಾವ ಬೀರುತ್ತಾರೆ. ಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಎಂಎಲ್‌ಎ ಆಗದೆ ಮುಖ್ಯಮಂತ್ರಿಯಾದರು ಎಂಬುದನ್ನು ಡಿ.ಕೆ. ಶಿವಕುಮಾರ್ ನೆನಪಿಸಿದರು.


ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಕೂಲಿ ಕೊಡಿ ಎಂಬ ನಿಮ್ಮ ಹೇಳಿಕೆಗೆ ಮಾಜಿ ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಎರಡು ಬಾರಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರಿಗೆ ಮೊದಲು ಕೂಲಿ ಕೊಡಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡದ ಡಿ.ಕೆ. ಶಿವಕುಮಾರ್, ರಾಜಣ್ಣ ದೊಡ್ಡವರು ಎಂದು ವ್ಯಂಗ್ಯವಾಗಿ ಹೇಳಿದರು.