
ಬೆಂಗಳೂರು,ಮಾ.೯- ಖಾಲಿಯಿರುವ ಹಾಗೂ ಮುಂಬರುವ ೬ ತಿಂಗಳಲ್ಲಿ ಖಾಲಿಯಾಗಲಿರುವ ಪ್ರಾಂಶುಪಾಲರ ಹುದ್ದೆಗಳಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಮೇಲ್ಮನೆಯಲ್ಲಿ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ (ಸರ್ಕಾರಿ ಪದವಿ ಪೂರ್ವ ಕಾಲೇಜು) ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರಿಂದ ವ್ಯಕ್ತಿ ಪೂರ್ವೋತ್ತರ ದಸ್ತಾವೇಜುಗಳು ನಿರ್ದೇಶನಾಲಯದಲ್ಲಿ ಸ್ವೀಕೃತವಾಗಿದ್ದು ಅವುಗಳು ಪರಿಶೀಲನೆಯ ಹಂತದಲ್ಲಿವೆ ಎಂದು ಕಾಂಗ್ರೆಸ್ ನ ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನ್ಯಾಸಕರ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದಕ್ಕೆ ಸ್ವೀಕೃತವಾದ ೪೬೧ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಉಪನ್ಯಾಸಕರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ನಂತರ ಸದರಿ ಪಟ್ಟಿಯಾನುಸಾರ ಮತ್ತು ಚಾಲ್ತಿಯಲ್ಲಿರುವ ಸರ್ಕಾರದ ನಿಯಮಗಳನ್ವಯ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಪರಿಶೀಲಿಸಿ, ಪ್ರಾಂಶುಪಾಲರ ಹುದ್ದೆಗಳಿಗೆ ಮುಂಬಡ್ತಿ ನಂತರ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿದ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಹೇಳಿದರು.
೧೨೨೫ ಪ್ರಾಂಶುಪಾಲರ ವೃಂದದ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ೩೦೬ ನೇರ ನೇಮಕಾತಿಗೆ ಮತ್ತು ೯೧೯ ಬಡ್ತಿಗೆ ಮೀಸಲಿರುತ್ತವೆ. ನೇರ ನೇಮಕಾತಿಯ ೩೦೬ ಹುದ್ದೆಗಳ ಪೈಕಿ ೨೪೭ ಹುದ್ದೆಗಳನ್ನು ಸೇವಾ ನಿರತ ಉಪನ್ಯಾಸಕರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ತಿಳಿಸಿದರು.
ಇನ್ನುಳಿದಂತೆ ಪ್ರಸ್ತುತ ಬಡ್ತಿ ಕೋಟಾದಡಿ ಖಾಲಿ ಇರುವ ಹಾಗೂ ಮುಂಬರುವ ೬ ತಿಂಗಳಲ್ಲಿ ಖಾಲಿಯಾಗಲಿರುವ ವಾಂಶುಪಾಲರ ಹುದ್ದೆಗಳಿಗೆ ಶಾಲಾ ಶಿಕ್ಷಣ ಇಲಾಖೆ(ಸರ್ಕಾರಿ ಪದವಿ ಪೂರ್ವ ಕಾಲೇಜು) ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರಿಗೆ ಮುಂಬಡ್ತಿ ನೀಡಲು ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ಖಾಲಿಯಿರುವ ೫೬೧ ಪ್ರಾಂಶುಪಾಲರ ಹುದ್ದೆಗಳಿಗೆ ಆಯಾ ಕಾಲೇಜಿನ ಹಿರಿಯ ಉಪನ್ಯಾಸಕರುಗಳನ್ನು ಕರ್ನಾಟಕ ನಾಗರಿಕ ಸೇ ನಿಯಮಗಳ ನಿಯಮ-೬೮ ರಡಿ ಪ್ರಾಂಶುಪಾಲರ ಹುದ್ದೆಗೆ ಪ್ರಭಾರದಲ್ಲಿರಿಸಿ ಶೈಕ್ಷಣಿಕ, ಆಡಳಿತಾತ್ಮಕ ಚಟುವಟಿಕೆ ಮತ್ತು ಪರೀಕ್ಷಾ ಕಾರ್ಯಗಳಿಗೆ ತೊಂದರೆ ಉಂಟಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ ಉಪನ್ಯಾಸಕರ ವೃಂದದ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದಕ್ಕೆ ಸ್ವೀಕೃತವಾದ ೪೬೧ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಜೇಷ್ಠತಾ ಪಟ್ಟಿ ಅಂತಿಮಗೊಂಡ ನಂತರ ಉಪನ್ಯಾಸಕರ ವೃಂದದಿಂದ ಪ್ರಾಂಶುಪಾಲರ ವೃಂದಕ್ಕೆ ಬಡ್ತಿ ನೀಡುವ =ಬಗ್ಗೆ ಚಾಲ್ತಿಯಲ್ಲಿರುವ ಸರ್ಕಾರದ ನಿಯಮಗಳನ್ವಯ ಪರಿಶೀಲಿಸಿ, ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.





























