
ಕಲಬುರಗಿ,ಮಾ.28: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀರಾಮ ನವಮಿ ಉತ್ಸವ ಅತಿ ವೈಭವದಿಂದ ಆಚರಿಸಲಾಯಿತು.
ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ, ಮಧ್ಯಾಹ್ನ ಶ್ರೀ ರಾಮ ದೇವರ ತೊಟ್ಟಿಲೋತ್ಸವ, ಮಹಾಮಂಗಳಾರತಿ ನೆರವೇರಿತು. ಈ ಸಂದರ್ಭದಲ್ಲಿ ಅರ್ಚಕರಾದ ಗುಂಡಾಚಾರ್ಯ ನರಿಬೋಳ ಅವರು ಮಾತನಾಡಿ ಶ್ರೀ ರಾಮದೇವರು ತ್ರೇತಾಯುಗದಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಅವತಾರ ಮಾಡಿದರು. ಶ್ರೀರಾಮ ದೇವರ ಆದರ್ಶಗಳು ಇಂದಿಗೂ ಎಲ್ಲರಿಗೂ ಮಾರ್ಗದರ್ಶನ ಮಾಡುವ ಸರ್ವಕಾಲಿಕ ತತ್ವಗಳನ್ನು ಹೊಂದಿವೆ. ಶ್ರೀರಾಮ ಸ್ವಯಂ ಭಗವಂತನ ಅವತಾರವಾದರೂ ಸಾಮಾನ್ಯರಂತೆ ಬಾಳಿದರು. ಶ್ರೀರಾಮ ಅನೇಕ ದುಷ್ಟರನ್ನು ಸಂಹಾರ ಮಾಡಿ ಧರ್ಮ ಸ್ಥಾಪನೆ ಮಾಡಿದರು. ಅವರ ಆಡಳಿತ ಪ್ರಜೆಗಳಿಗೆ ಸುವರ್ಣಯುಗವಾಗಿತ್ತು. ಅದಕ್ಕೆ ಇಂದಿಗೂ ಜನರು ರಾಮರಾಜ್ಯದ ಕಲ್ಪನೆಯನ್ನು ಬಯಸುತ್ತಾರೆ ಎಂದರು.
ನರಸಿಂಹ ಅಗ್ನಿಹೋತ್ರಿ, ವಿಜಯಕುಮಾರ ದೇವನಹಳ್ಳಿ, ಗುರುರಾಜ ಭಂಕೂರ್, ಪುರುಷೋತ್ತಮ ಮಠ, ಮಾಧವ ಗುಡಿ, ಸುರೇಶ ವೆಲ್ಲಾಳ, ಗೋಪಾಲರಾವ್, ಶಾಮರಾವ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು. ಬಂದ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.



























