Home ಮುಖಪುಟ ಸುದ್ದಿ ಇತಿಹಾಸ ಪ್ರಸಿದ್ಧ ಕರಗ ಉತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಕರಗ ಉತ್ಸವ ಸಂಪನ್ನ

ಬೆಂಗಳೂರಿನ ಇತಿಹಾಸ ಪ್ರಸಿದ್ಧ ಕರಗ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಬೆಂಗಳೂರು.ಏ.೨-ವಿಶ್ವ ವಿಖ್ಯಾತ ಐತಿಹಾಸಿಕ ಕರಗ ಮಹೋತ್ಸವವು ಶಾಸ್ತ್ರೋಕ್ತವಾಗಿ ಸಮಾಪ್ತಿಯಾಗಿದೆ. ಕಳೆದ ರಾತ್ರಿ ೨.೧೦ ಗಂಟೆಗೆ ಕರಗ ಮಹೋತ್ಸವಕ್ಕೆ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆತಿದ್ದು, ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಸಮರ್ಪಕ ಸಿದ್ಧತೆಗಳ ನಡುವೆ ಯಶಸ್ವಿಯಾಗಿ ನೆರವೇರಿತು.


ಈ ಬಾರಿ ಕರಗ ಉತ್ಸವದಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ಐತಿಹಾಸಿಕ ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವ ಈ ವರ್ಷವೂ ಅದ್ದೂರಿಯಾಗಿ ಜರುಗಿದ್ದು, ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದ್ದವು. ಧರ್ಮರಾಯಸ್ವಾಮಿ ದೇವಸ್ಥಾನವು ನವವಧುವಿನಂತೆ ಅಲಂಕರಿಸಿಕೊಂಡು ಕಂಗೊಳಿಸುತ್ತಿತ್ತು.


ಕರಗ ಸಾಗಿದ ಮಾರ್ಗದ ಮೂಲಕ ಭಕ್ತರು ರಾತ್ರಿ ಪೂರ್ತಿ ಜಾಗರಣೆ ಮಾಡಿ ದೇವಿಯನ್ನು ಕಣ್ಣುತುಂಬಿಕೊಂಡರು. ಈ ಬಾರಿಯೂ ಜ್ಞಾನೇಂದ್ರ ಅವರು ಕರಗ ಹೊತ್ತಿದ್ದು, ಯಾವುದೇ ಅಡ್ಡಿ ಆತಂಕಗಳಿಲ್ಲದೆ ಉತ್ಸವ ಸುಸೂತ್ರವಾಗಿ ನೆರವೇರಿತು.


ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮಧ್ಯರಾತ್ರಿ ೨.೧೦ಕ್ಕೆ ಹೊರಟ ಕರಗವು ವಿವಿಧ ಪೇಟೆಗಳನ್ನು ಸುತ್ತಿ, ಮಸ್ತಾನ್ ಷಾ ದರ್ಗಾ, ಅಣ್ಣಮ್ಮ ದೇವಸ್ಥಾನ ಸೇರಿದಂತೆ ಒಟ್ಟು ೨೬ ದೇವಸ್ಥಾನಗಳಿಗೆ ದರ್ಶನ ನೀಡಿ ಇಂದು ಬೆಳಿಗ್ಗೆ ೯.೫೦ಕ್ಕೆ ಮರಳಿ ದೇವಸ್ಥಾನಕ್ಕೆ ಆಗಮಿಸಿತು.


ಒಟ್ಟಾರೆ, ಈ ಬಾರಿಯ ಬೆಂಗಳೂರು ಕರಗ ಮಹೋತ್ಸವ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ಅದ್ದೂರಿಯಾಗಿ ಜರುಗಿದ್ದು, ಲಕ್ಷಾಂತರ ಭಕ್ತರು ದ್ರೌಪದಿ ಕರಗವನ್ನು ಕಣ್ತುಂಬಿಕೊಂಡರು.