
ಬೆಂಗಳೂರು, ಫೆ. ೯- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಅನುಮತಿ ನೀಡುವ ಬಗ್ಗೆ ಇದೇ ಬುಧವಾರ ಫೆ. ೧೧ ರಂದು ಒಂದು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅವಕಾಶ ನೀಡುವ ಸಂಬಂಧ ಇಂದು ಬೆಳಿಗ್ಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾದ ವೆಂಕಟೇಶ್‌ಪ್ರಸಾದ್, ವಕ್ತಾರ ವಿನಯ್ ಮೃತ್ಯುಂಜಯ ಹಾಗೂ ಆರ್‌ಸಿಬಿ ಪ್ರತಿನಿಧಿ ರಾಜೇಶ್ ಮೆನನ್ ಅವರು ತಮ್ಮನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ ಎಂದರು.
ಕಳೆದ ಮಾರ್ಚ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯಿಂದ ೧೧ ಮಂದಿ ಮೃತಪಟ್ಟ ನಂತರ ರಾಜ್ಯ ಸರ್ಕಾರ ನ್ಯಾ. ಕುನ್ಹಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ನ್ಯಾ. ಕುನ್ಹಾ ಅವರು ಕ್ರಿಕೆಟ್ ಪಂದ್ಯಾವಳಿಯ ವೇಳೆ ಏನೆಲ್ಲಾ ಸುರಕ್ಷತಾ ಕ್ರಮಗಳು ಆಗಬೇಕು ಎಂಬ ಬಗ್ಗೆ ಶಿಫಾರಸ್ಸುಗಳನ್ನು ಮಾಡಿದ್ದರು. ಈ ಶಿಫಾರಸ್ಸುಗಳ ಅಧ್ಯಯನ ಮಾಡಿ ಕೆಸಿಎಗೆ ಈ ಶಿಫಾರಸ್ಸುಗಳನ್ನು ಜಾರಿ ಮಾಡುವಂತೆ ಸೂಚನೆ ನೀಡಲಾಗಿತ್ತು ಹಾಗೂ ಇದರ ಮೇಲ್ವಿಚಾರಣೆಗೆ ಸರ್ಕಾರ ಜಿಬಿಎ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು ಎಂದರು.
ಈಗ ಐಪಿಎಲ್ ಪಂದ್ಯಾವಳಿ ಆರಂಭವಾಗುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ ಪಂದ್ಯಾವಳಿ ಆಯೋಜಿಸಲು ಅನುಮತಿ ಕೊಡಿ ಎಂದು ಕೆಸಿಎ ಹಾಗೂ ಆರ್‌ಸಿಬಿ ಮನವಿ ಮಾಡಿದೆ. ಹಾಗಾಗಿ ಇದೇ ಬುಧವಾರ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾ. ಖುನ್ನಾ ಸಮಿತಿ ವರದಿಯ ಶಿಫಾರಸ್ಸುಗಳು ಅನುಷ್ಠಾನವಾಗಿದೆಯೇ ಎಂಬ ಬಗ್ಗೆ ಚರ್ಚಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗೂ ಈ ಸಂಬಂಧ ಚರ್ಚೆ ಮಾಡಬೇಕಿದೆ. ಹಾಗಾಗಿ ಬುಧವಾರ ಐಪಿಎಲ್ ಪಂದ್ಯಗಳಿಗೆ ಬೆಂಗಳೂರಿಗೆ ಅವಕಾಶ ನೀಡುವ ಬಗ್ಗೆ ಒಂದು ತೀರ್ಮಾನ ಮಾಡುತ್ತೇವೆ ಎಂದರು.
ಸರ್ಕಾರಕ್ಕೆ ಪ್ರೇರಕ್ಷಕರ ಸುರಕ್ಷತೆ ಮುಖ್ಯ. ಕಾಲ್ತುಳಿತದಂತಹ ಘಟನೆಗಳು ಮರುಕಳಿಸಬಾರದು. ಹಾಗಾಗಿ ಎಲ್ಲದರ ಬಗ್ಗೆಯೂ ಸಮಗ್ರ ಚರ್ಚೆ ನಡೆಸಿ ಸೂಕ್ತ ತೀರ್ಮಾನವನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಬುಧವಾರ ನಡೆಯಲಿರುವ ಸಭೆಯಲ್ಲಿ ಜಿಬಿಎ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಇಂಧನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಹಾಗೂ ಉನ್ನತಾಧಿಕಾರಿಗಳು ಪಾಲ್ಗೊಳ್ಳುವರು. ಎಲ್ಲವನ್ನು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.
ಈ ಹಿಂದೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಷರತ್ತು ಬದ್ಧ ಅನುಮತಿ ನೀಡಿತ್ತು. ನ್ಯಾ. ಕುನ್ಹಾ ವರದಿಯ ಶಿಫಾರಸ್ಸುಗಳ ಅನುಷ್ಠಾನಕ್ಕೂ ಸೂಚಿಸಿತ್ತು. ನ್ಯಾ. ಕುನ್ಹಾ ಅವರು ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸುರಕ್ಷತೆಗೆ ಏನೆಲ್ಲಾ ಕ್ರಮಗಳಾಗಬೇಕು ಎಂಬ ಬಗ್ಗೆ ಶಿಫಾರಸ್ಸುಗಳನ್ನು ಮಾಡಿದ್ದರು. ಇವುಗಳಲ್ಲಿ ಕ್ರೀಡಾಂಗಣದ ಗೇಟ್ ಅಗಲ, ಸುರಕ್ಷತಾ ಕ್ರಮಗಳು, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳಾಗಬೇಕು ಎಂದು ಕುನ್ಹಾ ಅವರು ತಮ್ಮ ಶಿಫಾರಸ್ಸಿನಲ್ಲಿ ಹೇಳಿದ್ದರು. ಇವುಗಳನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸೂಚಿಸಿತ್ತು. ಅದರಂತೆ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಇಂದು ಗೃಹ ಸಚಿವರನ್ನು ಭೇಟಿ ಮಾಡಿದ ಕೆಸಿಎ ನಿಯೋಗ ಹಲವಾರು ವಿಚಾರಗಳನ್ನು ಗೃಹ ಸಚಿವರ ಗಮನಕ್ಕೆ ತಂದಿದೆ ಎನ್ನಲಾಗಿದೆ.
ಅಂತಿಮವಾಗಿ ಬುಧವಾರ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳಿಗೆ ಅನುಮತಿ ಸಿಗುತ್ತದೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ.
ಬಾಕ್ಸ್..
ಶುಭ ಸುದ್ಧಿ ಸಿಗುವ ವಿಶ್ವಾಸ
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಬುಧವಾರ ಶುಭ ಸುದ್ದಿ ಸಿಗುವ ವಿಶ್ವಾಸವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದರು.
ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಗಳನ್ನು ನಡೆಸುವ ಸಂಬಂಧ ಕೆಸಿಎ ಹಾಗೂ ಆರ್‌ಸಿಬಿಯ ಜಂಟಿ ನಿಯೋಗ ಇಂದು ಗೃಹ ಸಚಿವರನ್ನು ಭೇಟಿ ಮಾಡಿದ್ದೇವೆ. ಒಳ್ಳೆಯ ಚರ್ಚೆಯಾಗಿದೆ. ಗೃಹ ಸಚಿವರು ಫೆ. ೧೧ ರಂದು ಉನ್ನತಾಧಿಕಾರಿಗಳ ಜತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದೇವೆ ಎಂದರು.
ಪ್ರೇಕ್ಷಕರ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏನೆಲ್ಲಾ ಶಿಫಾರಸ್ಸುಗಳನ್ನು ಸೂಚಿಸಿದೆಯೋ ಎಲ್ಲವನ್ನು ಕೆಸಿಎಯಿಂದ ಪೂರ್ಣ ಮಾಡುತ್ತೇವೆ. ಇನ್ನೆರಡು-ಮೂರು ದಿನಗಳಲ್ಲಿ ಖಂಡಿತ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಅವರು ತಿಳಿಸಿದರು.
























