
ನವದೆಹಲಿ, ಮಾ.೨೯- ಪಶ್ಚಿಮ ಏಷ್ಯಾ ಬಿಕ್ಕಟ್ಟು ನಿಸ್ಸಂದೇಹವಾಗಿ ಸವಾಲಿನ ಸಮಯ.ಇದರಿಂದ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇಂತಹ ಸಮಯದಲ್ಲಿ, ಪರಿಸ್ಥಿತಿಗಳನ್ನು ರಾಜಕೀಯಗೊಳಿಸಬಾರದು. ಜೊತೆಗೆ ವದಂತಿಗಳಿಗೆ ಜನರು ಕಿವಿಗೊಡಬಾರದು ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕುಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ವದಂತಿಗಳ ಹರಡುವಿಕೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ತಪ್ಪು ಮಾಹಿತಿ ಪ್ರಸಾರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ ಸರ್ಕಾರದ ಅಧಿಕೃತ ಸಂಪರ್ಕ ಮಾತ್ರ ಜನರು ನಂಬಬೇಕು ಎಂದು ಹೇಳಿದ್ದಾರೆ.
ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ ೧೩೨ ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಅವರು ನಿಸ್ಸಂದೇಹವಾಗಿಯೂ ಸವಾಲಿನ ಸಮಯ.ನಾಗರಿಕರು ಒಗ್ಗಟ್ಟಿನಿಂದ ಇದ್ದು ಸವಾಲನ್ನು ಜಯಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ ಅವರು ಈ ವಿಷಯದ ಬಗ್ಗೆ ರಾಜಕೀಯ ಮಾಡುವವರು ದೂರವಿರಬೇಕು ಎಂದಿದ್ದಾರೆ.
ಭಾರತದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಮಧ್ಯಪ್ರಾಚ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ “ಯುದ್ಧ ನಡೆಯುತ್ತಿರುವ ಪ್ರದೇಶ ಇಂಧನ ಅಗತ್ಯಗಳ ಪ್ರಮುಖ ಕೇಂದ್ರವಾಗಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬಿಕ್ಕಟ್ಟು ವಿಶ್ವಾದ್ಯಂತ ಹೆಚ್ಚಿದೆ.
ಜಾಗತಿಕ ಸಂಬಂಧಗಳು, ವಿವಿಧ ದೇಶಗಳಿಂದ ಬಂದ ನೆರವು ಮತ್ತು ಕಳೆದ ದಶಕದಲ್ಲಿ ಅದು ನಿರ್ಮಿಸಿರುವ ಸಾಮರ್ಥ್ಯಗಳಿಂದಾಗಿ ಭಾರತ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ ಎಂದಿದ್ದಾರೆ.
ದೇಶದ ೧೪೦ ಕೋಟಿ ನಾಗರಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದೆ. ಇದರಲ್ಲಿ ಸ್ವಾರ್ಥ ರಾಜಕೀಯಕ್ಕೆ ಅವಕಾಶವಿಲ್ಲ. ವದಂತಿಗಳನ್ನು ಹರಡುವವರು ದೇಶಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತಿದ್ದಾರೆ, ಎಲ್ಲರೂ ಜಾಗರೂಕರಾಗಿರಿ ಮತ್ತು ತಪ್ಪು ಮಾಹಿತಿಯಿಂದ ದಾರಿ ತಪ್ಪಬೇಡಿ ಎಂದು ಮನವಿ ಮಾಡಿದ್ದಾರೆ.
೧ ಕೋಟಿ ಭಾರತೀಯರ ರಕ್ಷಣೆಗೆ ಧನ್ಯವಾದ
ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ನಡೆಯುತ್ತಿರುವ ಸಂಘರ್ಷದ ಸಮಯ ಜಗತ್ತಿನಲ್ಲಿ ಕೋವಿಡ್ ಸೋಂಕಿನ ಸಂದರ್ಭ ನೆನಪು ಮಾಡಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಒಂದು ಕೋಟಿಗೂ ಅಧಿಕ ಭಾರತೀಯರನ್ನು ಬೆಂಬಲಿಸಿದ ಆ ದೇಶಗಳ ಮುಖ್ಯಸ್ಥರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.
ಮಾರ್ಚ್ ತಿಂಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಸಂಘರ್ಷದ ತಿಂಗಳಾಗಿದೆ. . ಕೋವಿಡ್ ಸಮಯದಲ್ಲಿ ಜಗತ್ತು ದೀರ್ಘಕಾಲದವರೆಗೆ ಹಲವಾರು ಸಮಸ್ಯೆ ಎದುರಿಸುವುದನ್ನು ನೆನಪು ಮಾಡಿದೆ ಎಂದಿದ್ದಾರೆ.
ಕೋವಿಡ್ ಬಿಕ್ಕಟ್ಟಿನಿಂದ ಹೊರಬಂದ ನಂತರ, ಜಗತ್ತು ಹೊಸ ಆರಂಭದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದಾಗ್ಯೂ, ವಿವಿಧ ಪ್ರದೇಶಗಳಲ್ಲಿ, ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿಗಳು ಅದೇ ಸ್ಥಿತಿ ನಿರ್ಮಾಣ ಮಾಡಿವೆ ಎಂದು ತಿಳಿಸಿದ್ದಾರೆ.
ನಮ್ಮ ನೆರೆಹೊರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಭೀಕರ ಯುದ್ಧ ನಡೆಯುತ್ತಿದೆ. ಲಕ್ಷಾಂತರ ಭಾರತೀಯ ಕುಟುಂಬಗಳ ಸಂಬಂಧಿಕರು ಈ ದೇಶಗಳಲ್ಲಿ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಒಂದು ಕೋಟಿಗೂ ಹೆಚ್ಚು ಭಾರತೀಯರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸಿದ್ದಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ತಂತ್ರಜ್ಞಾನ, ಸಾಮಾಜಿಕ ಜಾಗೃತಿ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತು ಅಭಿಪ್ರಾಯ ಹಂಚಿಕೊಂಡ ಪ್ರಧಾನಿ, ಜಾಗತಿಕ ನಾಯಕರು ಮತ್ತು ತಂತ್ರಜ್ಞಾನ ಸಿಇಒಗಳನ್ನು ಭೇಟಿಯಾದ ೨೦೨೬ ರ ಎಐ ಇಂಪ್ಯಾಕ್ಟ್ ಶೃಂಗಸಭೆಯ ವಿಶ್ವ ನಾಯಕರಿಗೆ ಹಲವಾರು ವಿಷಯಗಳನ್ನು ತೋರಿಸಿದೆ. ಪ್ರಾಣಿಗಳ ಚಿಕಿತ್ಸೆಯಲ್ಲಿ ಎಐ ಹೇಗೆ ಸಹಾಯ ಮಾಡುತ್ತಿದೆ ಎನ್ನುವುದನ್ನು ನಿರೂಪಿಸಿದೆ ಎಂದರು
ಶೂನ್ಯ ದೋಷ, ಉನ್ನತ-ಗುಣಮಟ್ಟದ ಉತ್ಪನ್ನಗಳನ್ನು ಗುರಿಯಾಗಿಟ್ಟುಕೊಂಡು ಭಾರತೀಯ ತಯಾರಕರು ಮತ್ತು ಸ್ಟಾರ್ಟ್-ಅಪ್‌ಗಳು ಗುರಿ ಹೊಂದುವ ಅಗತ್ಯವಿದೆ ಎಂದು ಹೇಳಿದ ಅವರು ಭಾರತ ಜಾಗತಿಕವಾಗಿ ಗೌರವಿಸಲ್ಪಟ್ಟ ಮತ್ತು ಮೌಲ್ಯಯುತವಾದ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಬೇಕು, ನಾವೀನ್ಯತೆಯ ಕೇಂದ್ರವಾಗಿ ದೇಶದ ಸ್ಥಾನವನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.
ದೇಶಾದ್ಯಂತ ಹಸ್ತಪ್ರತಿ ಸಂಗ್ರಹ
ದೇಶಾದ್ಯಂತ ಹಸ್ತಪ್ರತಿಗಳನ್ನು ದಾಖಲಿಸುವ ಮತ್ತು ಸಂರಕ್ಷಿಸುವ ಗುರಿಯನ್ನು ಜ್ಞಾನ ಭಾರತಂ ಆಪ್ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜ್ಞಾನ ಭಾರತಂ ಸಮೀಕ್ಷೆ ಭಾರತದ ಶ್ರೀಮಂತ ಹಸ್ತಪ್ರತಿ ಪರಂಪರೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತದೆ.ನಾಗರಿಕರು ತಾವು ಹೊಂದಿರುವ ಅಥವಾ ತಿಳಿದಿರುವ ಯಾವುದೇ ಹಸ್ತಪ್ರತಿಗಳ ಛಾಯಾಚಿತ್ರಗಳು ಅಥವಾ ವಿವರಗಳನ್ನು ಅಪ್ಲಿಕೇಶನ್ ಮೂಲಕ ಅಪ್‌ಲೋಡ್ ಮಾಡುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರತಿಯೊಂದು ಸಲ್ಲಿಕೆಯನ್ನು ದಾಖಲಿಸುವ ಮೊದಲು ಸರಿಯಾದ ಪರಿಶೀಲನೆಗೆ ಒಳಗಾಗುತ್ತದೆ ಮತ್ತು ಸಾವಿರಾರು ಹಸ್ತಪ್ರತಿಗಳನ್ನು ಜನರು ಈಗಾಗಲೇ ಹಂಚಿಕೊಂಡಿದ್ದಾರೆ, ದುಹ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಸಾಮೂಹಿಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.





























