Home Lead News ಟೀಂ ಇಂಡಿಯಾ ಮತ್ತೆ ಟಿ.20 ವಿಶ್ವಕಪ್ ಚಾಂಪಿಯನ್: ಇತಿಹಾಸ ನಿರ್ಮಿಸಿದ ಸೂರ್ಯ ಪಡೆ

ಟೀಂ ಇಂಡಿಯಾ ಮತ್ತೆ ಟಿ.20 ವಿಶ್ವಕಪ್ ಚಾಂಪಿಯನ್: ಇತಿಹಾಸ ನಿರ್ಮಿಸಿದ ಸೂರ್ಯ ಪಡೆ

ಅಹಮದಾಬಾದ್, ಮಾ.8- ಟಿ. 20 ವಿಶ್ವಕಪ್ ಕ್ರಿಕೆಟ್ ನಲ್ಲಿ ‌ಟೀಂ ಇಂಡಿಯಾ ಮತ್ತೊಮ್ಮೆ ಸಾಮ್ರಾಟನಾಗಿ ವಿಜೃಂಭಿಸಿದೆ. ಇದರೊಂದಿಗೆ ಸತತ ಎರಡನೇ ಬಾರಿಗೆ ಭಾರತ ಚಾಂಪಿಯನ್ನಾಗಿ ಹೊರಹೊಮ್ಮಿದೆ.


ಇಂದು ಇಲ್ಲಿ ಭಾರತದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆಲುವಿಗೆ ಅಗತ್ಯವಿದ್ದ 256 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್ ಗಳಲ್ಲಿ159 ರನ್ ಗಳಿಗೆ ಆಲೌಟ್ ಆಗಿ 96 ರನ್ ಗಳಿಂದ ಸೋಲೊಪ್ಪಿಕೊಂಡಿತು‌. ಅಲ್ಲದೆ ಭಾರತದ ಬೌಲಿಂಗ್ ಎದುರು ಕಿವೀಸ್ ಮಂಕಾಗಿ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಲು ವಿಫಲವಾಯಿತು.


ಹಾಗೆ ನೋಡಿದರೆ ಈ ಫೈನಲ್ ಪಂದ್ಯ ಅಪಾರ ಕುತೂಹಲ ಕೆರಳಿಸಿತ್ತು.‌ಭಾರತದ ಸಿಡಿಲಬ್ಬರದ ಬ್ಯಾಟಿಂಗ್ ನಂತರ ಕಿವೀಸ್ ಒತ್ತಡಕ್ಕೆ ಸಿಲುಕಿ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಲು ವಿಫಲವಾಯಿತು.


ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ 32 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದು ಕೊಂಡಿತು. ಫಿನ್ ಆಲೆನ್ 9 ಹಾಗೂ ರಚಿನ್ ರವೀಂದ್ರ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು.


ಗ್ಲೆನ್ ಫಿಲಿಪ್ಸ್ 5, ಮಾರ್ಕ್ ಚಾಪ್ ಮನ್ ಮೂರು ರನ್ ಗಳಿಸಿ ಔಟಾದರು. ಟಿಮ್ ಸೆಫರ್ಟ್ 52 ರನ್ ಗಳಿಸಿದರು.
ಡೆರೆಲ್ ಮಿಚೆಲ್ 17 ರನ್ ಗಳಿಸಿದರೆ, ಜೇಮ್ಸ್ ನೀಶಂ 8 ಹಾಗೂ ಮ್ಯಾಟ್ ಹೆನ್ರಿ ಶೂನ್ಯಕ್ಕೆ ನಿರ್ಗಮಿಸಿದರು. ಮಿಚೆಲ್ ಸ್ಯಾಂಟ್ನರ್ 43 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.


ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದು ನ್ಯೂಜಿಲೆಂಡ್ ಸೋಲಿಗೆ ಪ್ರಮುಖ ಪಾತ್ರರಾದರು.
ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಇಷಾನ್ ಕಿಶನ್ ಮೂರು ಕ್ಯಾಚ್ವಗಳನ್ನು ಹಿಡಿದು ಮಿಂಚಿದರು.


ಕೊನೆಯ ವಿಕೆಟ್ ಬೀಳುತ್ತಿದ್ದಂತೆ ಭಾರತ ಪಾಳಯದಲ್ಲಿ ವಿಜಯದ ದುಂದುಬಿ ಮೊಳಗಿತು. ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಸಾವಿರಾರು ಪ್ರೇಕ್ಷಕರು ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಜಯಕಾರ ಹಾಕಿ ವಿಜೃಂಭಿಸಿ‌ ಕುಣಿದು ಕುಪ್ಪಳಿಸಿದರು.


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ರನ್ ಹೊಳೆಯನ್ನೇ ಹರಿಸಿತು.


ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಇಷಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 255 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ಬ್ಯಾಟರ್ ಗಳಾದ ಸಂಜು ಸಾಮ್ಸನ್ ಮತ್ತು ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿದರು. ಈ ಜೋಡಿ ಮೊದಲ ವಿಕೆಟ್ ಗೆ 7.1 ಓವರ್ ಗಳಲ್ಲಿ 98 ರನ್ ಸೇರಿಸಿತು.


ಸ್ಯಾಮ್ಸನ್ 45 ಎಸೆತಗಳಲ್ಲಿ ಭರ್ಜರಿ 89 ರನ್ ಸಿಡಿಸಿ ನಿರ್ಗಮಿಸಿದರು. ಮತ್ತೊಂದೆಡೆ ಸತತ ವೈಫಲ್ಯ ಕಂಡಿದ್ದ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಟಿ.20 ವಿಶ್ವಕಪ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದರು.


21ಎಸೆತಗಳಲ್ಲಿ 7 ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿ 52ರನ್ ಗಳಿಸಿದ್ದಾಗ ರಚಿನ್ ರವೀಂದ್ರ ಬೌಲಿಂಗ್ ನಲ್ಲಿ ಔಟಾದರು.


ಇನ್ನೊಂದೆಡೆ ಇಷಾನ್ ಕಿಶನ್ 25 ಎಸೆತಗಳಲ್ಲಿ 54 ರನ್ ಚಚ್ಚಿದರು.


ಇದಾದ ಬಳಿಕ ಸೂರ್ಯಕುಮಾರ್ ಶೂನ್ಯಕ್ಕೆ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಶಿವಂ ದುಬೆ ಕೇವಲ 8 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿದರೆ, ತಿಲಕ್ ವರ್ಮಾ 12ರನ್ ಗಳಿಸಿ ಅಜೇಯರಾಗುಳಿದರು. ನ್ಯೂಜಿಲೆಂಡ್ ಪರ ಜೇಮ್ಸ್ಕಿವೀನೀಶಂ ಮೂರು ವಿಕೆಟ್ ಪಡೆದರು.

ಪಟಾಕಿ ಸಿಡಿಸಿ ಸಂಭ್ರಮ

ಟಿ. 20 ವಿಶ್ವಕಪ್ ನಲ್ಲಿ ಭಾರತ ಗೆಲುವು ಸಾಧಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಅಭಿಮಾನಿಗಳು ರಸ್ತೆಗಿಳಿದು ಪಟಾಕಿ ಸಿಡಿಸಿ ಸಂಭ್ರಮಿಸಿದರು.